ಬೀದರ್ : ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೀದರ್‌ನ ಜಮಿಸ್ತಾನಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಿರಣ್ (26) ಮೃತ ದುರ್ದೈವಿ ಎಂದು ತಿಳಿದುಬದಿದೆ.
ಮೂರು ದಿನಗಳ ಹಿಂದೆ ಅನ್ಯಕೋಮಿನ ಯುವತಿಯನ್ನು ಚುಡಾಯಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಿರಣ್‌ಗೆ ಕೆಲವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಬಳಿಕ ನಿನ್ನೆ ಸಂಜೆ ಸುಮಾರು 5 ಗಂಟೆಗೆ ಸಂಧಾನದ ನೆಪದಲ್ಲಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ.
ಈ ಸಂಬಂಧ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಂ.ಡಿ. ಜುನೈದ್ ಸಿರಾಜ್ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ಬೀದರ್ ಗ್ರಾಮೀಣ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕುಡಚಿ ಸೇತುವೆ ಜಲಾವೃತ ; ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತ!



















