ತಮಿಳುನಾಡು : ಕೃಷ್ಣಗಿರಿ ಜಿಲ್ಲೆಯ ಹೊಸೂರು ಸಮೀಪದ ಸೂಳಗಿರಿ ಬಳಿ ಟ್ರಕ್ ಚಾಲಕನೊಬ್ಬ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಪಂಜಾಬ್ ರಾಜ್ಯದ ಮಾನ್ಸಾ ಜಿಲ್ಲೆಗೆ ಸೇರಿದ 36 ವರ್ಷದ ಕುರ್ಲಾಲ್ ಸಿಂಗ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ಸೂಳಗಿರಿ ಬಳಿಯ ಡಾಬಾ ಬಳಿ ವಿಶ್ರಾಂತಿಗಾಗಿ ತನ್ನ ಟ್ರಕ್ ನಿಲ್ಲಿಸಿದ್ದನು. ಕೆಲ ಸಮಯದ ಬಳಿಕ ಜೋರಾಗಿ ಮಾತನಾಡುತ್ತಾ ಟ್ರಕ್ ಬಳಿ ಬಂದ ಆತ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಆನ್ ಮಾಡಿದ್ದಾನೆ.
ಬಳಿಕ ಮೊದಲೇ ಬಕೆಟ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಡಿಸೇಲ್ ಅನ್ನು ತನ್ನ ಮೈಮೇಲೆ ಸುರಿದುಕೊಂಡು ಬೆಂಕಿ ಪೊಟ್ಟಣದಿಂದ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸ್ಥಳೀಯರು ಕೂಡಲೇ ಧಾವಿಸಿ ನೀರು ಹಾಗೂ ಮಣ್ಣು ಎರಚಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲೇ ಕುರ್ಲಾಲ್ ಸಿಂಗ್‌ಗೆ ಶೇ.50ರಷ್ಟು ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಕೃಷ್ಣಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸಂಬಂಧ ಕೃಷ್ಣಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ ನಿಖರ ಕಾರಣ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : SIRಗೆ ನೂತನ ಮಾರ್ಗಸೂಚಿ : ಬೆಂಗಳೂರಿನಲ್ಲಿ ಮನೆ-ಮನೆ ಪರಿಶೀಲನೆಗೆ ಹೊಸ ನಿಯಮ


















