ವಿರುದುನಗರ್ : ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳ ಇಂಗ್ಲಿಷ್ ಭಾಷಾ ಜ್ಞಾನದ ಕುರಿತು ತಮಿಳುನಾಡು ಸಚಿವೆ ಕೀರ್ತನಾ ಸಂಪತ್ ನೀಡಿರುವ ಹೇಳಿಕೆಯೊಂದು ರಾಜ್ಯದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಜುಲೈ 2 ರಂದು ವಿರುದುನಗರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದಕ್ಕೆ ಸಚಿವರು ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಆಡಳಿತಾರೂಢ ಟಿವಿಕೆ ಮತ್ತು ವಿಪಕ್ಷ ಡಿಎಂಕೆ ನಡುವೆ ಭಾರೀ ವಾಗ್ವಾದಕ್ಕೆ ನಾಂದಿ ಹಾಡಿದೆ.
ಸಚಿವೆ ಕೀರ್ತನಾ ಸಂಪತ್ ಅವರು ಶಾಲಾ ಭೇಟಿಯ ವೇಳೆ ವಿದ್ಯಾರ್ಥಿನಿಯೊಬ್ಬಳನ್ನು “ನಿಮ್ಮ ತಂದೆ ಏನು ಕೆಲಸ ಮಾಡುತ್ತಾರೆ?” ಎಂದು ಪ್ರಶ್ನಿಸಿದ್ದರು. ಆದರೆ ಮಗು ತಕ್ಷಣವೇ ಉತ್ತರಿಸದಿದ್ದಾಗ, ಅಲ್ಲಿಯೇ ಇದ್ದ ಶಿಕ್ಷಕಿಯತ್ತ ತಿರುಗಿದ ಸಚಿವೆ, “ಈ ಮಗುವಿಗೆ ಒಂದು ಸರಳ ಪ್ರಶ್ನೆಗೂ ಉತ್ತರಿಸಲು ಸಾಧ್ಯವಾಗುತ್ತಿಲ್ಲವೇ” ಎಂದು ಬೇಸರ ವ್ಯಕ್ತಪಡಿಸಿದರು. ಆ ಬಳಿಕ ಶಿಕ್ಷಕಿಯೇ ಮಗುವನ್ನು ಇಂಗ್ಲಿಷ್‌ನಲ್ಲಿ ಪ್ರಶ್ನಿಸಿದಾಗ, ಆ ವಿದ್ಯಾರ್ಥಿನಿ ತಡಬಡಾಯಿಸುತ್ತಲೇ ತನ್ನ ತಂದೆಯ ಹೆಸರು ಮತ್ತು ವೃತ್ತಿಯ ಕುರಿತು ಇಂಗ್ಲಿಷ್‌ನಲ್ಲಿ ಉತ್ತರಿಸಿದ್ದಾಳೆ. ಈ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಹಿಂದಿನ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದ ಸಚಿವೆ
ಈ ಇಡೀ ಘಟನೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವೆ ಕೀರ್ತನಾ ಸಂಪತ್, ಸರ್ಕಾರಿ ಶಾಲಾ ವಿದ್ಯಾರ್ಥಿನಿಗೆ ಇಂಗ್ಲಿಷ್‌ನಲ್ಲಿ ಉತ್ತರಿಸಲು ಕಷ್ಟವಾಗುತ್ತಿರುವುದು ರಾಜ್ಯದ ಹಿಂದಿನ ಡಿಎಂಕೆ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ. ಡಿಎಂಕೆ ಆಡಳಿತಾವಧಿಯಲ್ಲಿ ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದು, ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಎಷ್ಟು ಕುಸಿದಿದೆ ಎಂಬುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ ಎಂದು ಅವರು ಜರೆದಿದ್ದಾರೆ.
ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಬೇಡಿ: ಡಿಎಂಕೆ ಆಕ್ರೋಶ
ಮತ್ತೊಂದೆಡೆ, ಸಚಿವೆಯ ವರ್ತನೆಗೆ ಡಿಎಂಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೀರ್ತನಾ ಸಂಪತ್ ಅವರು ರಾಜಕೀಯ ಲಾಭಕ್ಕಾಗಿ ಸಣ್ಣ ಮಗುವನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಸಚಿವರ ಈ ನಡೆ ಅತ್ಯಂತ ಅಸೂಕ್ಷ್ಮವಾದುದಾಗಿದೆ. ವಿದ್ಯಾರ್ಥಿನಿಯ ಇಂಗ್ಲಿಷ್ ಭಾಷೆಯನ್ನು ಸಾರ್ವಜನಿಕವಾಗಿ ಅಳೆಯುವ ಬದಲು, ಆಕೆಗೆ ಧೈರ್ಯ ತುಂಬಿ ಪ್ರೋತ್ಸಾಹಿಸಬೇಕಿತ್ತು ಎಂದು ಹರಿಹಾಯ್ದಿದ್ದಾರೆ.
ಟೀಕೆಗಳಿಗೆ ಸಚಿವೆ ಕೀರ್ತನಾ ಸ್ಪಷ್ಟನೆ
ತಮ್ಮ ಮೇಲಿನ ಟೀಕೆಗಳಿಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಸುದೀರ್ಘ ಸ್ಪಷ್ಟನೆ ನೀಡಿರುವ ಸಚಿವೆ ಕೀರ್ತನಾ, ತಾವೂ ಕೂಡ ಸರ್ಕಾರಿ ಶಾಲೆಯಲ್ಲೇ ತಮಿಳು ಮಾಧ್ಯಮದಲ್ಲಿ ಓದಿ ಬಂದಿರುವುದಾಗಿ ಹೇಳಿದ್ದಾರೆ. “ನಾನು ಕಾರ್ಪೊರೇಟ್ ಜಗತ್ತಿಗೆ ಕಾಲಿಟ್ಟಾಗ ಇಂಗ್ಲಿಷ್ ಭಾಷೆಯಿಲ್ಲದೆ ತೀವ್ರವಾಗಿ ಪರದಾಡಿದ್ದೆ. ಕಷ್ಟಪಟ್ಟು ಕಲಿತು ಇಂದು ಈ ಸ್ಥಾನಕ್ಕೆ ಬಂದಿದ್ದೇನೆ. ನನ್ನ ಉದ್ದೇಶ ಮಗುವನ್ನು ಅಣಕಿಸುವುದಾಗಿರಲಿಲ್ಲ. ಇಂದು ನನ್ನನ್ನು ಟೀಕಿಸುತ್ತಿರುವವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆಯೇ?” ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ತಮಿಳು ಮಾಧ್ಯಮದ ವಿದ್ಯಾರ್ಥಿಗಳನ್ನು ಹೀಯಾಳಿಸುವ ಪ್ರಯತ್ನವನ್ನು ವಿರೋಧ ಪಕ್ಷಗಳು ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ : ರಾಜ್ಯ ಪಾಲಿಟಿಕ್ಸ್‌ಗೆ ಹೆಚ್‌ಡಿಕೆ ರಿಟರ್ನ್.. ಡಿಕೆಶಿ ಸಿಎಂ ಆದ ಬೆನ್ನಲ್ಲೇ ಪುಲ್ ಆಕ್ಟೀವ್



















