ಉಡುಪಿ : ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ 80 ಸಾವಿರ ಹಣ ಕಳವು ಮಾಡಿದ ಆರೋಪದಡಿ ಮೂವರು ಮಹಿಳೆಯರನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿಗಳಾದ ನೇತ್ರಾವತಿ (33), ಶಾರದ (50) ಹಾಗೂ ದುರ್ಗಮ್ಮ (44) ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ, ನಿಮಿಶಾ ಹಾಗೂ ಅವರ ಪತಿ ಪ್ರಜೋಶ್ ಅವರು ಜುಲೈ 5ರಂದು ದೇವಸ್ಥಾನದಲ್ಲಿ ದೇವರ ದರ್ಶನ ಮುಗಿಸಿ ಹೊರಾಂಗಣಕ್ಕೆ ಬಂದು ವ್ಯಾನಿಟಿ ಬ್ಯಾಗ್ ಪರಿಶೀಲಿಸಿದ ವೇಳೆ ಅದರ ಜಿಪ್ ತೆರೆದಿದ್ದು, ಒಳಗಿದ್ದ 80 ಸಾವಿರ ನಗದು ಹೊಂದಿದ್ದ ಪರ್ಸ್ ಕಳವಾಗಿರುವುದು ಗೊತ್ತಾಗಿದೆ.
ದೇವಸ್ಥಾನದ ಸುತ್ತಮುತ್ತ ಹುಡುಕಿದರೂ ಪರ್ಸ್ ಪತ್ತೆಯಾಗದ ಹಿನ್ನೆಲೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಸಾರ್ವಜನಿಕರು ತೆಗೆದ ಛಾಯಾಚಿತ್ರಗಳು ಹಾಗೂ ತಾಂತ್ರಿಕ ಮಾಹಿತಿಯ ನೆರವಿನಿಂದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿನಿಗೆ ಇಂಗ್ಲಿಷ್ ಬರಲ್ಲ ಎಂದ ಸಚಿವೆ : ತಮಿಳುನಾಡಿನಲ್ಲಿ ಡಿಎಂಕೆ-ಟಿವಿಕೆ ವಾಕ್ಸಮರ ತಾರಕಕ್ಕೆ!



















