ಗುರುಗ್ರಾಮ : ಹರ್ಯಾಣದ ಗುರುಗ್ರಾಮದ ಮಾನೇಸರ್‌ನಲ್ಲಿ 25 ವರ್ಷದ ಯುವಕನೊಬ್ಬ ಮದುವೆಯಾದ ಕೇವಲ ಮೂರೇ ತಿಂಗಳಲ್ಲಿ ತನ್ನ ಪ್ರೇಯಸಿಯೊಂದಿಗೆ ಸೇರಿ ಪತ್ನಿಯನ್ನೇ ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ತಮ್ಮ ಮೂರು ವರ್ಷಗಳ ಅನೈತಿಕ ಸಂಬಂಧವನ್ನು ಮುಂದುವರಿಸಲು ಈ ಇಬ್ಬರು ಆರೋಪಿಗಳು ಸೇರಿ ಪತ್ನಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪುಣೆಯಲ್ಲಿ ಕೇತನ್ ಅಗರ್ವಾಲ್ ಎಂಬ ಯುವ ಉದ್ಯಮಿಯನ್ನು ಆತನ ಭಾವೀ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆಗೈದ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಇಂಥ ಇನ್ನೊಂದು ಘಟನೆ ವರದಿಯಾಗಿದೆ.
ಮದುವೆಯಾದ ಮೂರೇ ತಿಂಗಳಿಗೆ ಪತ್ನಿ ನಾಪತ್ತೆ
ಮೇ 22ರಂದು ಸಂತ್ರಸ್ತ ಯುವತಿಯ ತಾಯಿ ಮಾನೇಸರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ ಬಳಿಕವೇ ಈ ಘೋರ ಹತ್ಯಾಕಾಂಡ ಬೆಳಕಿಗೆ ಬಂದಿದೆ. ಅವರ 22 ವರ್ಷದ ಮಗಳಿಗೆ ಫೆಬ್ರವರಿ ತಿಂಗಳಲ್ಲಿ ಮಾನೇಸರ್ ನಿವಾಸಿ ಅಂಕಿತ್ ಎಂಬಾತನೊಂದಿಗೆ ವಿವಾಹವಾಗಿತ್ತು. ಆದರೆ ಮೇ 21ರಂದು ಆಕೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಯುವತಿಯ ಕುಟುಂಬದವರು ಆಕೆಗಾಗಿ ಎಲ್ಲೆಡೆ ಹುಡುಕಾಟ ನಡೆಸಿ, ಗಂಡನ ಮನೆಯವರನ್ನು ವಿಚಾರಿಸಿದಾಗ ಅವರಿಂದ ಯಾವುದೇ ಸೂಕ್ತ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ತಾಯಿ ಪೊಲೀಸರ ಮೊರೆ ಹೋಗಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಮೇ 22ರಂದು ಮಾನೇಸರ್‌ನ ಬಾಡಿಗೆ ಕೋಣೆಯೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದ್ದು, ಆಕೆಯನ್ನು ಗುಂಡಿಕ್ಕಿ ಕೊಂದಿರುವುದು ದೃಢಪಟ್ಟಿತ್ತು.
ಪ್ರೇಯಸಿ ಮನೆಯಲ್ಲೇ ಹೆಣೆಯಲಾಗಿತ್ತು ಕೊಲೆಗೆ ಸ್ಕೆಚ್
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು ಅಂತಿಮವಾಗಿ ಆರೋಪಿ ಪತಿ ಅಂಕಿತ್ (25) ಮತ್ತು ಆತನ ಪ್ರೇಯಸಿ ರಜನಿ ದೇವಿ (38) ಎಂಬಾಕೆಯನ್ನು ಬಂಧಿಸಿದ್ದಾರೆ. ಹರ್ಯಾಣದ ಝಜ್ಜರ್ ಜಿಲ್ಲೆಯ ನಿವಾಸಿಯಾದ ರಜನಿ ದೇವಿ ಮಾನೇಸರ್‌ನಲ್ಲಿ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರೆ, ಅಂಕಿತ್ ಅದೇ ಪ್ರದೇಶದಲ್ಲಿ ತಂಬಾಕು ಅಂಗಡಿ ನಡೆಸುತ್ತಿದ್ದ. ಕಳೆದ ಮೂರು ವರ್ಷಗಳಿಂದ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ಅಂಕಿತ್‌ಗೆ ಮದುವೆಯಾದ ಮೇಲೆಯೂ ಇವರ ಸಂಬಂಧ ಮುಂದುವರಿದಿತ್ತು.
ಕೊನೆಗೆ ಪತ್ನಿಯನ್ನು ದಾರಿಯಿಂದ ತಪ್ಪಿಸಲು ನಿರ್ಧರಿಸಿದ ಇಬ್ಬರು, ರಜನಿ ದೇವಿಯ ಬಾಡಿಗೆ ಕೋಣೆಯಲ್ಲೇ ಕೊಲೆಗೆ ಸ್ಕೆಚ್ ಹಾಕಿದ್ದರು. ಯೋಜನೆಯಂತೆ ಘಟನೆ ನಡೆದ ದಿನ ಅಂಕಿತ್ ತನ್ನ ಪತ್ನಿಯನ್ನು ಪ್ರೇಯಸಿಯ ಮನೆಗೆ ಕರೆದೊಯ್ದಿದ್ದ. ಅಲ್ಲಿ ಇಬ್ಬರೂ ಸೇರಿ ಆಕೆಗೆ ಗುಂಡಿಕ್ಕಿ ಕೊಂದಿದ್ದಾರೆ. ಈ ಕೊಲೆಗಾಗಿಯೇ ಎರಡು ತಿಂಗಳ ಮುಂಚಿತವಾಗಿ ಉತ್ತರ ಪ್ರದೇಶದಿಂದ ಕಾನೂನುಬಾಹಿರವಾಗಿ ಪಿಸ್ತೂಲ್ ಖರೀದಿಸಲಾಗಿತ್ತು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.
ಹತ್ಯೆಯ ನಂತರ ನೇಪಾಳಕ್ಕೆ ಪರಾರಿ
ಪತ್ನಿಯನ್ನು ಹತ್ಯೆ ಮಾಡಿದ ನಂತರ ಆರೋಪಿಗಳಾದ ಅಂಕಿತ್ ಮತ್ತು ರಜನಿ ದೇವಿ ತಕ್ಷಣವೇ ಹರಿದ್ವಾರಕ್ಕೆ ಓಡಿಹೋಗಿದ್ದರು. ಅಲ್ಲಿಂದ ಭಾರತದ ಗಡಿ ದಾಟಿ ನೇಪಾಳಕ್ಕೆ ಪರಾರಿಯಾಗಿದ್ದರು. ಪೊಲೀಸರಿಂದ ತಪ್ಪಿಸಿಕೊಂಡು ಜೂನ್ 30 ರವರೆಗೆ ನೇಪಾಳದಲ್ಲೇ ತಲೆಮರೆಸಿಕೊಂಡಿದ್ದ ಆರೋಪಿಗಳು, ನಂತರ ಭಾರತಕ್ಕೆ ಮರಳುತ್ತಿದ್ದಂತೆ ಮಾನೇಸರ್‌ನಲ್ಲಿ ಕ್ರೈಂ ಬ್ರಾಂಚ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ನ್ಯಾಯಾಲಯವು ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಮುಂಗಾರು ಆರ್ಭಟ : ಗುಡ್ಡ ಕುಸಿದು ಮನೆಗಳು ಭೂಸಮಾಧಿ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಬಂದ್!



















