ಬೆಂಗಳೂರು : ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದಿನ್ನೂರು ರಾಮ ಮಂದಿರ ರಸ್ತೆಯ ಮನೆಯಲ್ಲಿ 37 ವರ್ಷದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತಳನ್ನು ಪಶ್ಚಿಮ ಬಂಗಾಳ ಮೂಲದ ಮೌಮೀತಾ ಬೋಸ್ ಎಂದು ಗುರುತಿಸಲಾಗಿದೆ.
ಮೌಮೀತಾ ಬೋಸ್ ಈ ಹಿಂದೆ ಸುದೀಪ್ ಬೋಸ್ ಅವರನ್ನು ವಿವಾಹವಾಗಿದ್ದು, ಬಳಿಕ ಪತಿ ಹಾಗೂ ಮಗನಿಂದ ದೂರವಾಗಿ ಬೆಂಗಳೂರಿಗೆ ಬಂದು ಖಾಸಗಿ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 10 ವರ್ಷಗಳಿಂದ ಅಮ್ಜದ್ ಪಾಷಾ ಎಂಬಾತನೊಂದಿಗೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಜೂನ್ 26ರಂದು ಮನೆಯಲ್ಲಿ ಅಮ್ಜದ್ ಪಾಷಾ ಇಲ್ಲದ ವೇಳೆ ಮೌಮೀತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಮೊಬೈಲ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡಿ, “ನನ್ನ ಸಾವಿಗೆ ನಾನೇ ಕಾರಣ” ಎಂದು ಹೇಳಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಮೌಮೀತಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಮದ್ಯದ ಅಮಲಿನಲ್ಲಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನೆಗೆ ಹಿಂದಿರುಗಿದ ಅಮ್ಜದ್ ಪಾಷಾ ಘಟನೆ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆರ್.ಟಿ.ನಗರ ಪೊಲೀಸರು ವೀಡಿಯೋ ಸೇರಿದಂತೆ ಇತರೆ ಸಾಕ್ಷ್ಯಾಧಾರಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮೊಬೈಲ್ ಟಾರ್ಚ್ ಬೆಳಕಿನಲ್ಲಿ KKRTC ಬಸ್ ಸಂಚಾರ – ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ!



















