ಬೆಂಗಳೂರು: ರಾಜಧಾನಿಯಲ್ಲಿ ಅಪರಾಧ ಚಟುವಟಿಕೆಗಳು ಹಾಗೂ ರೌಡಿಗಳ ಉಪಟಳಕ್ಕೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರ ಪೊಲೀಸರು ಭಾನುವಾರ ನಸುಕಿನ ಜಾವ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಟ್ಟುನಿಟ್ಟಿನ ಸೂಚನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ನಗರದ ವಿವಿಧ ವಿಭಾಗಗಳ ವ್ಯಾಪ್ತಿಯಲ್ಲಿರುವ ಒಟ್ಟು 149 ರೌಡಿಶೀಟರ್ಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದೆ.
ನಗರದ ಪೂರ್ವ, ಪಶ್ಚಿಮ, ಈಶಾನ್ಯ, ಉತ್ತರ, ದಕ್ಷಿಣ ಹಾಗೂ ಕೇಂದ್ರ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಜಂಟಿ ಕಾರ್ಯಾಚರಣೆ ನಡೆದಿದೆ. ಪ್ರಮುಖವಾಗಿ ಯಲಹಂಕ, ಸಂಪಿಗೆಹಳ್ಳಿ, ಬಾಗಲೂರು, ಕೊಡಿಗೇಹಳ್ಳಿ, ಕೊತ್ತನೂರು ಹಾಗೂ ಗಾಂಧಿನಗರ ವಿಭಾಗದ ವ್ಯಾಪ್ತಿಯ ರೌಡಿಗಳ ಮನೆಗಳಿಗೆ ಭಾನುವಾರ ಮುಂಜಾನೆ ಪೊಲೀಸರು ದಾಂಗುಡಿಯಿಟ್ಟಿದ್ದಾರೆ. ನಿದ್ದೆಯಲ್ಲಿದ್ದ ರೌಡಿಗಳ ಮನೆ ಬಾಗಿಲು ತಟ್ಟಿ ಹೊರಗೆ ಕರೆತಂದ ಪೊಲೀಸರು, ಮನೆಯ ಇಂಚಿಂಚನ್ನೂ ಜಾಲಾಡಿದ್ದಾರೆ.
ಈ ವೇಳೆ ಹಳೇ ಅಪರಾಧಿಗಳು ಮತ್ತು ಸಕ್ರಿಯ ರೌಡಿಶೀಟರ್ಗಳ ಪೂರ್ವಾಪರ, ಪ್ರಸ್ತುತ ಅವರು ಮಾಡುತ್ತಿರುವ ಉದ್ಯೋಗ, ಆದಾಯದ ಮೂಲಗಳು ಹಾಗೂ ಅವರ ವಿರುದ್ಧ ಈಗಾಗಲೇ ದಾಖಲಾಗಿರುವ ಅಪರಾಧ ಪ್ರಕರಣಗಳ ಕುರಿತು ಸಮಗ್ರ ಮಾಹಿತಿಯನ್ನು ಕಲೆಹಾಕಲಾಗಿದೆ.
ನ್ಯಾಯಾಲಯದ ಪ್ರಕರಣಗಳ ಪರಿಶೀಲನೆ
ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ನ್ಯಾಯಾಲಯದ ವಿಚಾರಣೆಗೆ ಸರಿಯಾಗಿ ಹಾಜರಾಗದಿರುವುದು, ಜಾರಿಯಾಗಿರುವ ವಾರಂಟ್ಗಳು, ನ್ಯಾಯಾಲಯದಿಂದ ಅಪರಾಧಿ ಎಂದು ಘೋಷಿಸಲ್ಪಟ್ಟಿರುವುದು ಹಾಗೂ ದೀರ್ಘಕಾಲದ ಬಾಕಿ ಪ್ರಕರಣಗಳ (ಎಲ್ಪಿಆರ್) ಕುರಿತು ಪೊಲೀಸರು ಪ್ರತಿಯೊಬ್ಬ ರೌಡಿಯ ವಿಚಾರಣೆ ನಡೆಸಿದರು.
ಮುಂದಿನ ದಿನಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಹಾಗೂ ಹಳೇ ಹಗೆತನದ ಪ್ರತೀಕಾರದ ಕೃತ್ಯಗಳಿಗೆ ಮುಂದಾದರೆ ಮುಲಾಜಿಲ್ಲದೆ ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಾಹನಗಳ ತಪಾಸಣೆ ಹಾಗೂ ಅಕ್ರಮ ಮದ್ಯ ಜಪ್ತಿ
ಉತ್ತರ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸಿಪಿಗಳು, ಇನ್ಸ್ಪೆಕ್ಟರ್ಗಳು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 172 ಪೊಲೀಸರು ಪಾಲ್ಗೊಂಡಿದ್ದರು. ಕಾರ್ಯಾಚರಣೆಯ ಭಾಗವಾಗಿ ನಗರದ ಪ್ರಮುಖ ಜಂಕ್ಷನ್ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದ್ದು, ಒಟ್ಟು 347 ವಾಹನಗಳನ್ನು ಪರಿಶೀಲಿಸಲಾಗಿದೆ.
ಈ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ 53 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇದೇ ವೇಳೆ ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಯೊಬ್ಬನ ಮನೆ ಪರಿಶೀಲಿಸಿದಾಗ 8.5 ಲೀಟರ್ ಅಕ್ರಮ ಮದ್ಯ ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಿರುವ ಪೊಲೀಸರು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೌಡಿ ನಿಗ್ರಹ ದಳದ ಚುರುಕು ಕಾರ್ಯಾಚರಣೆ
ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಹೊಸದಾಗಿ ರೌಡಿ ನಿಗ್ರಹ ದಳವನ್ನು ರಚಿಸಿದ್ದು, ಅದರ ಮುಖ್ಯಸ್ಥರನ್ನಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಹೇಮಂತ್ ನಿಂಬಾಳ್ಕರ್ ಅವರನ್ನು ನೇಮಕ ಮಾಡಿದೆ. ಶನಿವಾರವಷ್ಟೇ ನಗರ ಮುಖ್ಯ ಪೊಲೀಸ್ ಕಮಿಷನರ್ ಆರ್. ಹಿತೇಂದ್ರ ಮತ್ತು ಹೇಮಂತ್ ನಿಂಬಾಳ್ಕರ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಭಾನುವಾರ ನಸುಕಿನಲ್ಲಿ ಈ ಬೃಹತ್ ದಾಳಿ ನಡೆದಿದೆ.
ಮುಂದಿನ ದಿನಗಳಲ್ಲಿಯೂ ರೌಡಿಶೀಟರ್ಗಳ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಾದಕ ವಸ್ತು ಮಾರಾಟದ ಜಾಲ, ರಾತ್ರಿ ವೇಳೆ ಅನಗತ್ಯವಾಗಿ ಗುಂಪುಗೂಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಮುಖ್ಯ ಪೊಲೀಸ್ ಕಮಿಷನರ್ ಆರ್. ಹಿತೇಂದ್ರ ಅವರು ಎಚ್ಚರಿಸಿದ್ದಾರೆ.


















