ಉತ್ತರ ಕನ್ನಡ : ರಸ್ತೆ ಇಲ್ಲ, ಶಾಶ್ವತ ಸೇತುವೆ ಇಲ್ಲ, ಮಳೆ ಬಂದರೆ ಗ್ರಾಮವೇ ಹೊರಜಗತ್ತಿನ ಸಂಪರ್ಕ ಕಳೆದುಕೊಳ್ಳುವಂತಹ ಪರಿಸ್ಥಿತಿ. ಕೊನೆಗೆ ಯಾರಾದರೂ ಮೃತಪಟ್ಟರೆ ಅವರ ಅಂತಿಮಯಾತ್ರೆಗೂ ಕೂಡ ಪ್ರವಾಹದ ನೀರನ್ನೇ ದಾಟಬೇಕಾದ ಅನಿವಾರ್ಯ ಇಲ್ಲಿನ ಜನರ ಬದುಕಿನ ಬವಣೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ದೊಡ್ಡಹಿತ್ತಲ್ ಮಜರೆಯಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಸಿದ್ದಾಪುರ ಭಾಗದ ಬೆಟ್ಟಗಳಿಂದ ಹರಿದು ಬಂದ ನೀರು ಭಾಸ್ಕೇರಿ ಹೊಳೆಯನ್ನು ಉಕ್ಕಿ ಹರಿಯುವಂತೆ ಮಾಡಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಸಂಪೂರ್ಣ ಜಲಾವೃತವಾಗಿದೆ.

ಈ ವೇಳೆ ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅಂತ್ಯಸಂಸ್ಕಾರಕ್ಕಾಗಿ ಮೃತದೇಹವನ್ನು ಕೊಂಡೊಯ್ಯುವುದೇ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬೇರೆ ಯಾವುದೇ ಮಾರ್ಗವಿಲ್ಲದ ಕಾರಣ, ಮೃತದೇಹವನ್ನು ಪೆಟ್ಟಿಗೆಯಲ್ಲಿ ಇರಿಸಿ, ನಾಲ್ಕೈದು ಯುವಕರು ಕುತ್ತಿಗೆ ಮಟ್ಟದವರೆಗೆ ಹರಿಯುತ್ತಿದ್ದ ಪ್ರವಾಹದ ನೀರಿನಲ್ಲೇ ತಲೆಯ ಮೇಲೆ ಹೊತ್ತು ಸಾಗಿದ್ದಾರೆ. ಈ ದೃಶ್ಯ ಗ್ರಾಮಸ್ಥರು ಎದುರಿಸುತ್ತಿರುವ ಮೂಲಸೌಕರ್ಯಗಳ ಕೊರತೆಯನ್ನು ಮತ್ತೊಮ್ಮೆ ಬಯಲಿಗೆಳೆದಿದೆ.
ದೊಡ್ಡಹಿತ್ತಲ್ ಮಜರೆಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು, ಸುಮಾರು 150ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಆದರೆ ಇಂದಿಗೂ ಈ ಗ್ರಾಮಕ್ಕೆ ಸರ್ಕಾರಿ ರಸ್ತೆ ಇಲ್ಲ, ಶಾಶ್ವತ ಸೇತುವೆಯೂ ಇಲ್ಲ. ಸ್ಥಳೀಯರು ಖಾಸಗಿ ತೋಟಗಳ ಮೂಲಕವೇ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಆ ಮಾರ್ಗಗಳು ಸಂಪೂರ್ಣ ನೀರಿನಲ್ಲಿ ಮುಳುಗುವುದರಿಂದ ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ತೆರಳುವ ಮಹಿಳೆಯರು, ವೃದ್ಧರು ಹಾಗೂ ರೋಗಿಗಳು ಪ್ರತಿದಿನ ಅಪಾಯದ ನಡುವೆಯೇ ಓಡಾಡಬೇಕಾಗಿದೆ.
ಪ್ರತೀ ವರ್ಷ ಇದೇ ಸಮಸ್ಯೆ ಮರುಕಳಿಸುತ್ತಿದ್ದರೂ, ಶಾಶ್ವತ ಪರಿಹಾರ ಮಾತ್ರ ಇನ್ನೂ ದೊರೆತಿಲ್ಲ ಎನ್ನುವುದು ಗ್ರಾಮಸ್ಥರ ಅಳಲಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಭಾಗಕ್ಕೆ ಶಾಶ್ವತ ರಸ್ತೆ ಹಾಗೂ ಸೇತುವೆ ನಿರ್ಮಿಸಿ ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದಿಸಬೇಕಾಗಿದೆ.
ಇದನ್ನೂ ಓದಿ : ಪ್ರೀತಿ ನಿರಾಕರಿಸಿದ ಅಪ್ರಾಪ್ತೆಯನ್ನು ನೆಲಕ್ಕೆ ಹಾಕಿ ತುಳಿದ ಪಾಗಲ್ ಪ್ರೇಮಿ



















