ಉಡುಪಿ : ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕನನ್ನು ಹಣದ ಆಸೆ ತೋರಿಸಿ ಕೇರಳಕ್ಕೆ ಕರೆದೊಯ್ದು ಬಲವಂತವಾಗಿ ಕೆಲಸಕ್ಕೆ ಸೇರಿಸಿ ಹಲ್ಲೆ ನಡೆಸಿದ ಹಾಗೂ ಜೀವ ಬೆದರಿಕೆ ಹಾಕಿದ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಘಟನಾ ಸಂಬಂಧ ಇಬ್ಬರು ಕಿಡಿಗೇಡಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಹಿತಿ ಪ್ರಕಾರ, ಮಟಪಾಡಿ ಗ್ರಾಮದ ನಿವಾಸಿ ತಾರೇಶ್ ಅವರ ಪುತ್ರನನ್ನು ಪರಿಚಯದ ಸಾಲಿಕೇರಿಯ ವಿಖ್ಯಾತ್ ಆಚಾರ್ಯ (19) ಹಾಗೂ ಮಟಪಾಡಿಯ ಸುಚಿತ್ ನಾಯಕ್ (20) ಅವರು ಜೂನ್ 1ರಂದು ಬ್ರಹ್ಮಾವರ ಬಸ್ ನಿಲ್ದಾಣದಿಂದ ಕರೆದೊಯ್ದಿದ್ದರು. ನಂತರ ಬಾಲಕನನ್ನು ಕೇರಳ-ಕರ್ನಾಟಕ ರಾಜ್ಯದ ಗಡಿ ಭಾಗ ತಲಪಾಡಿ ಸಮೀಪದ ಕುಂಜತ್ತೂರು ಪದವು ಪ್ರದೇಶದಲ್ಲಿರುವ ವುಡ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಸಿದ್ದರು.
ಬಾಲಕ ಕೆಲಸ ಮಾಡಲ್ಲ, ಮನೆಗೆ ಹೋಗುತ್ತೇನೆ ಎಂದು ಹೇಳಿದಾಗ ಜೂನ್ 9ರಂದು ವಾಸವಿದ್ದ ಕೋಣೆಯಲ್ಲಿ ಸುಚಿತ್ ನಾಯಕ್ ವೈರ್‌ನಿಂದ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದೇ ವೇಳೆ ವಿಖ್ಯಾತ್ ಆಚಾರ್ಯ ಚೂರಿ ತೋರಿಸಿ ಯಾರಿಗಾದರೂ ಈ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.
ಈ ಸಂಪೂರ್ಣ ಹಲ್ಲೆ ಮತ್ತು ಬೆದರಿಕೆಯ ದೃಶ್ಯವನ್ನು ಮತ್ತೊಬ್ಬ ಆರೋಪಿ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. ಬಾಲಕನ ಮೇಲೆ ಗಾಂಜಾ ಮಾರಾಟ ಮಾಡಿಸುವ ಪ್ರಯತ್ನವೂ ನಡೆದಿದ್ದು, ವೈರಲ್ ಆದ ವಿಡಿಯೋದಲ್ಲಿ ನಶೆ ಹಾಗೂ ಕೆಲಸ ನಿರಾಕರಣೆಯ ಬಗ್ಗೆ ಹೇಳಿಕೆಗಳೂ ಕೇಳಿಬಂದಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ನಂತರ ಅದೇ ದಿನ ಬಾಲಕ ತನ್ನ ಮನೆಯವರಿಗೆ ಕರೆ ಮಾಡಿ ತನ್ನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದಾನೆ. ಬಳಿಕ ಕುಟುಂಬದವರು ಸ್ಥಳಕ್ಕೆ ತೆರಳಿ ಬಾಲಕನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ನಂತರ ಬಾಲಕ ಮತ್ತೆ ಶಾಲೆಗೆ ಹಾಜರಾಗಿದ್ದಾನೆ.
ಈ ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ. ನಂತರ ಬಾಲಕನ ತಂದೆ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ವಿಖ್ಯಾತ್ ಆಚಾರ್ಯ ಮತ್ತು ಸುಚಿತ್ ನಾಯಕ್‌ನನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಬಾಲಪರಾಧಿಯನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಉದ್ಘಾಟನೆಯಾಗಿ ಒಂದೇ ವರ್ಷಕ್ಕೆ ಪಾಳು ಬಿದ್ದ ಶೌಚಾಲಯ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ!



















