ಬೆಂಗಳೂರು : ಟೆಸ್ಟ್ ಹಾಗೂ ಟಿ20 ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಇದೀಗ ಇಂಗ್ಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಗಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಿರುವ ಕೊಹ್ಲಿ, ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಅವರ ಮಾರ್ಗದರ್ಶನದಲ್ಲಿ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ನೆಟ್ಸ್‌ನಲ್ಲಿ ಕೊಹ್ಲಿ–ಬಾಂಗರ್ ಜುಗಲ್ಬಂದಿ
ವೈರಲ್ ಆಗಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ತಮ್ಮ ಕಿಟ್ ಬ್ಯಾಗ್ ಹೊತ್ತುಕೊಂಡು ತರಬೇತಿ ಮೈದಾನಕ್ಕೆ ಆಗಮಿಸುವುದು ಹಾಗೂ ಅವರನ್ನು ಸಂಜಯ್ ಬಾಂಗರ್ ಸ್ವಾಗತಿಸುವುದು ಸೆರೆಯಾಗಿದೆ. ಬಳಿಕ ಮೈದಾನದ ಮಧ್ಯಭಾಗದಲ್ಲಿ ಇಬ್ಬರೂ ಸುದೀರ್ಘ ಚರ್ಚೆಯಲ್ಲಿ ತೊಡಗಿರುವುದು ಮತ್ತು ಕೊಹ್ಲಿಗೆ ಬಾಂಗರ್ ತರಬೇತಿ ನೀಡುತ್ತಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ಇಂಗ್ಲೆಂಡ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಮುಂಬೈ ಮತ್ತು ಅಲಿಬಾಗ್‌ನಲ್ಲಿ ಸಂಜಯ್ ಬಾಂಗರ್ ಜೊತೆಗೂಡಿ ಬ್ಯಾಟಿಂಗ್ ತಂತ್ರಗಾರಿಕೆಯನ್ನು ಮತ್ತಷ್ಟು ಸಾಣೆ ಹಿಡಿಯುವತ್ತ ಗಮನ ಹರಿಸಿದ್ದಾರೆ. 2014ರಿಂದ 2019ರವರೆಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿದ್ದ ಬಾಂಗರ್ ಮಾರ್ಗದರ್ಶನದಲ್ಲಿ ಕೊಹ್ಲಿ ಅತ್ಯುನ್ನತ ಮಟ್ಟದ ಯಶಸ್ಸು ಸಾಧಿಸಿದ್ದರು ಎಂಬುದು ಗಮನಾರ್ಹ.
ಜುಲೈ 14ರಿಂದ ಏಕದಿನ ಸರಣಿ ಆರಂಭ
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 14ರಿಂದ ಆರಂಭವಾಗಲಿದ್ದು, ಈ ಸರಣಿಗಾಗಿ ಪ್ರಕಟಿಸಲಾಗಿರುವ 15 ಸದಸ್ಯರ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಅವರು ಆಡುವುದು ಫಿಟ್ನೆಸ್ ಕ್ಲಿಯರೆನ್ಸ್ ಮೇಲೆ ಅವಲಂಬಿತವಾಗಿದೆ. ಟೆಸ್ಟ್ ಮತ್ತು ಟಿ20ಯಿಂದ ನಿವೃತ್ತರಾದ ಬಳಿಕ ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಅವರಿಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಸರಣಿ ಇದಾಗಿದ್ದು, 2027ರ ಏಕದಿನ ವಿಶ್ವಕಪ್‌ಗೆ ತಂಡದ ಸಿದ್ಧತೆಯ ದೃಷ್ಟಿಯಿಂದಲೂ ಇದು ಪ್ರಮುಖ ಘಟ್ಟವಾಗಿದೆ.
ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಹರ್ಷ
ವಿರಾಟ್ ಕೊಹ್ಲಿ ಮೈದಾನಕ್ಕೆ ಮರಳುತ್ತಿರುವ ಬಗ್ಗೆ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. “ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾಯುತ್ತಿದೆ. ಇತರರಂತೆ ನಾನೂ ಕೂಡ ಅವರು ಮೈದಾನಕ್ಕಿಳಿಯುವುದನ್ನು ಎದುರು ನೋಡುತ್ತಿದ್ದೇನೆ” ಎಂದು ದೆಹಲಿ ಪ್ರೀಮಿಯರ್ ಲೀಗ್ 2026ರ ಹರಾಜು ಪ್ರಕ್ರಿಯೆ ವೇಳೆ ಅವರು ಹೇಳಿದ್ದಾರೆ. ಅಲ್ಲದೆ, ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ವೀಕ್ಷಿಸಲು ತಾವು ಇಂಗ್ಲೆಂಡ್‌ಗೆ ತೆರಳುವುದಾಗಿಯೂ ರಾಜ್‌ಕುಮಾರ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಚ್ ಕಾಯುತ್ತಿರುವ ಸೂರ್ಯವಂಶಿ : ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಲೆಕ್ಕಾಚಾರವೇನು?


















