ಕೊಡಗು : ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ–275ಕ್ಕೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿರುವ ಘಟನೆ ನಡೆದಿದೆ.
ಬೃಹತ್ ಗಾತ್ರದ ಮರ ರಸ್ತೆ ಮಧ್ಯೆ ಉರುಳಿಬಿದ್ದಿದ್ದರಿಂದ ಮಂಗಳೂರು–ಮೈಸೂರು ಮಾರ್ಗದಲ್ಲಿ ಎರಡೂ ದಿಕ್ಕಿನ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರು ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲೇ ಪರದಾಡುವಂತಾಯಿತು.
ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಸ್ಥಳೀಯರೂ ಸಿಬ್ಬಂದಿಗೆ ಕೈಜೋಡಿಸಿದ ಪರಿಣಾಮ ಕಾರ್ಯಾಚರಣೆ ವೇಗವಾಗಿ ನಡೆಯಿತು.
ಸುಮಾರು ಎರಡು ಗಂಟೆಗಳ ಕಾರ್ಯಾಚರಣೆಯ ಬಳಿಕ ಮರವನ್ನು ತೆರವುಗೊಳಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಪುನಃ ಆರಂಭಿಸಲಾಯಿತು. ಘಟನೆಯಿಂದ ಕೆಲಕಾಲ ವಾಹನ ದಟ್ಟಣೆ ಉಂಟಾದರೂ, ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.
ಇದನ್ನೂ ಓದಿ : ಮನೆಗೆ ನುಗ್ಗಿ ಅಕ್ಕ-ತಂಗಿಗೆ ಮಾರಣಾಂತಿಕ ಹಲ್ಲೆ, ಚಾಕು ಇರಿತ ; 10ಕ್ಕೂ ಹೆಚ್ಚು ಮಂದಿ ವಿರುದ್ಧ FIR!



















