ಲಂಡನ್ : ಇಂಗ್ಲೆಂಡ್ ಕ್ರಿಕೆಟ್ ತಂಡದ ಶ್ರೇಷ್ಠ ಆಲ್‌ರೌಂಡರ್ ಹಾಗೂ ನಾಯಕ ಬೆನ್ ಸ್ಟೋಕ್ಸ್ ಅವರು ಕೇವಲ 35ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಭೋಜನ ವಿರಾಮಕ್ಕೆ ಕೇವಲ 15 ನಿಮಿಷಗಳಿರುವಾಗ ದಿಢೀರ್ ಆಗಿ ತಮ್ಮ ನಿವೃತ್ತಿಯನ್ನು ಘೋಷಿಸುವ ಮೂಲಕ ಅವರು ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ್ದಾರೆ.
ದೀರ್ಘಕಾಲದ ಸ್ಪರ್ಧಾತ್ಮಕ ಸರಣಿಯ ಮಧ್ಯದಲ್ಲೇ ಒಬ್ಬ ದಂತಕಥೆಯಾದ ನಾಯಕ ಹೀಗೆ ಹಠಾತ್ತನೆ ನಿವೃತ್ತಿ ಘೋಷಿಸಿದ್ದು ಹಲವು ಊಹಾಪೋಹಗಳಿಗೆ ಮತ್ತು ಒಳಸಂಚುಗಳ ಸಿದ್ಧಾಂತಕ್ಕೆ ನಾಂದಿ ಹಾಡಿದೆ. ಸ್ಟೋಕ್ಸ್ ಅವರ ನಿವೃತ್ತಿ ಘೋಷಣೆಯ ಬೆನ್ನಲ್ಲೇ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು (ECB) ಬಲವಂತವಾಗಿ ಅವರನ್ನು ನಾಯಕತ್ವ ಹಾಗೂ ತಂಡದಿಂದ ಹೊರಹಾಕಿತೇ ಎಂಬ ಅನುಮಾನಗಳು ವ್ಯಾಪಕವಾಗಿ ಹರಿದಾಡತೊಡಗಿದ್ದವು.
ಲಾರ್ಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿದ ಬಳಿಕ, ಸ್ಟೋಕ್ಸ್ ತಡರಾತ್ರಿಯವರೆಗೂ ನೈಟ್‌ಕ್ಲಬ್‌ವೊಂದರಲ್ಲಿ ವಿಜಯೋತ್ಸವ ಆಚರಿಸಿದ್ದರು. ಈ ಸಂಬಂಧ ಅವರ ವಿರುದ್ಧ ಶಿಸ್ತುಕ್ರಮದ ಭಾಗವಾಗಿ ತನಿಖೆ ನಡೆಸಿ, ಓವಲ್ ಟೆಸ್ಟ್‌ನಿಂದ ಅವರನ್ನು ಹೊರಗಿಡಲಾಗಿತ್ತು. ಈ ನೈಟ್‌ಕ್ಲಬ್ ವಿವಾದವೇ ಮಂಡಳಿ ಹಾಗೂ ನಾಯಕನ ನಡುವಿನ ದೊಡ್ಡ ಕಂದಕಕ್ಕೆ ಕಾರಣವಾಗಿತ್ತು ಮತ್ತು ಅದರ ಪರಿಣಾಮವಾಗಿಯೇ ಸ್ಟೋಕ್ಸ್ ಅವಮಾನದಿಂದ ಹೊರನಡೆದರು ಎಂದು ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದವು.
ಸ್ಪಷ್ಟನೆ ನೀಡಿದ ಸ್ಟೋಕ್ಸ್
ಈ ಎಲ್ಲಾ ಊಹಾಪೋಹಗಳಿಗೆ ಇದೀಗ ಖುದ್ದಾಗಿ ಬೆನ್ ಸ್ಟೋಕ್ಸ್ ಸ್ಪಷ್ಟನೆ ನೀಡಿದ್ದಾರೆ. ಸ್ಕೈ ಸ್ಪೋರ್ಟ್ಸ್ (Sky Sports) ಜತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಮಂಡಳಿಯ ಯಾವುದೇ ಒತ್ತಡಕ್ಕೆ ಮಣಿದು ತಾವು ಈ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ತಮ್ಮ ನಿರ್ಧಾರಕ್ಕೆ ನೈಟ್‌ಕ್ಲಬ್ ವಿವಾದ ಅಥವಾ ಶಿಸ್ತುಕ್ರಮ ಕಾರಣವಲ್ಲ, ಬದಲಾಗಿ ತೀವ್ರ ಮಾನಸಿಕ ಆಯಾಸ (Burnout) ಮತ್ತು ಆಟದ ಮೇಲಿನ ಆಸಕ್ತಿ ಕುಗ್ಗುತ್ತಿರುವುದೇ ಮುಖ್ಯ ಕಾರಣ ಎಂದಿದ್ದಾರೆ. ಈ ಮಾನಸಿಕ ಕುಸಿತವು ಕಳೆದ ಚಳಿಗಾಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ 4-1 ಅಂತರದ ತೀವ್ರ ಆಶಸ್ ಸರಣಿ ಸೋಲಿನಿಂದಲೇ ಆರಂಭವಾಗಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ. ಸುದೀರ್ಘ 15 ವರ್ಷಗಳ ಕಾಲ ತಂಡಕ್ಕಾಗಿ ಅವಿರತ ಶ್ರಮಪಟ್ಟ ಬಳಿಕ ಇದೀಗ ಸಂಪೂರ್ಣವಾಗಿ ದಣಿದಿರುವ ಭಾವನೆ ಮೂಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯದ ವಾರವು ತಮಗೆ ಬಹಳ ವಿಚಿತ್ರ ಹಾಗೂ ಕಷ್ಟಕರವಾಗಿತ್ತು ಎಂದು ಬಣ್ಣಿಸಿರುವ ಸ್ಟೋಕ್ಸ್, ತಮ್ಮ ವೃತ್ತಿಜೀವನದಲ್ಲಿ ನಕಾರಾತ್ಮಕ ಯೋಚನೆಗಳು ಆ ಸಮಯದಲ್ಲಿ ಮರುಕಳಿಸಿದ್ದವು ಎಂದು ಹಂಚಿಕೊಂಡಿದ್ದಾರೆ. ಡ್ರೆಸ್ಸಿಂಗ್ ರೂಂನಲ್ಲಿ ದೀರ್ಘಕಾಲದ ಸ್ನೇಹಿತ ಜೋ ರೂಟ್ ಪಕ್ಕ ಕುಳಿತಿದ್ದಾಗ ತಮ್ಮ ಮಾನಸಿಕ ದಣಿವಿನ ತೀವ್ರತೆ ಅವರಿಗೆ ಅರಿವಾಯಿತು ಎನ್ನಲಾಗಿದೆ. ಇದೇ ವೇಳೆ ಓವಲ್ ಟೆಸ್ಟ್‌ನಿಂದ ಕೈಬಿಟ್ಟ ನಂತರ ಡರ್ಹಾಮ್ (Durham) ಕೌಂಟಿ ತಂಡದ ಪರ ಕಣಕ್ಕಿಳಿದಾಗ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ತೀವ್ರ ಒತ್ತಡದಿಂದ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿತ್ತು. ಆ ನೆಮ್ಮದಿಯನ್ನು ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರಳಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ಅವರಿಗೆ ಖಚಿತವಾದಾಗಲೇ, ಈ ಬಿಗ್ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಸಹ ಆಟಗಾರರೊಂದಿಗೂ ಮುಕ್ತವಾಗಿ ಮಾತನಾಡಿದ್ದ ಸ್ಟೋಕ್ಸ್, 2027ರವರೆಗೆ ಅವರ ಕೇಂದ್ರೀಯ ಒಪ್ಪಂದ ಇದ್ದರೂ ಅನಿವಾರ್ಯವಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದರು. “ಮೇಲ್ನೋಟಕ್ಕೆ ಇದು ಸ್ವಾರ್ಥದ ನಿರ್ಧಾರ ಎನಿಸಿದರೂ, ಸದ್ಯದ ಪರಿಸ್ಥಿತಿಯಲ್ಲಿ ನನ್ನ ಮಾನಸಿಕ ನೆಮ್ಮದಿಗೆ ಇದುವೇ ಅತ್ಯುತ್ತಮ ಮಾರ್ಗವಾಗಿದೆ,” ಎಂದು ಹೇಳಿರುವ ಸ್ಟೋಕ್ಸ್, ತಾವು ಇಷ್ಟಪಡುವ ಈ ಕ್ರೀಡೆಯನ್ನು ದ್ವೇಷಿಸುವ ಹಂತಕ್ಕೆ ಹೋಗುವ ಮುನ್ನವೇ ಗೌರವಯುತವಾಗಿ ನಿರ್ಗಮಿಸಲು ನಿರ್ಧರಿಸಿದ್ದಾರೆ. ಎರಡು ಬಾರಿ ವಿಶ್ವಕಪ್ ವಿಜೇತ ಮತ್ತು ಹಲವು ಮಹತ್ವದ ಪಂದ್ಯಗಳ ಏಕಾಂಗಿ ಹೀರೋ ಆಗಿರುವ ಸ್ಟೋಕ್ಸ್ ನಿರ್ಗಮನ, ಇಂಗ್ಲೆಂಡ್ ಕ್ರಿಕೆಟ್‌ಗೆ ತುಂಬಲಾರದ ನಷ್ಟವನ್ನು ತಂದೊಡ್ಡಿದೆ.
ಇದನ್ನೂ ಓದಿ : ವಿಶ್ವಕಪ್ ನಿರಾಸೆಯ ಮಧ್ಯೆ 2028ರ ಒಲಿಂಪಿಕ್ಸ್‌ಗೆ ಲಗ್ಗೆಯಿಟ್ಟ ಭಾರತ ಮಹಿಳಾ ಕ್ರಿಕೆಟ್ ತಂಡ



















