ಪುಣೆ : ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಇದೀಗ ಮತ್ತೊಂದು ಅಚ್ಚರಿಯ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಪರ ವಕಾಲತ್ತು ವಹಿಸುವ ವಿಚಾರದಲ್ಲಿ ವಕೀಲರು ಹಾಗೂ ಆರೋಪಿಯ ಕುಟುಂಬದ ನಡುವೆ ತೀವ್ರ ವಾಗ್ವಾದ ಭುಗಿಲೆದ್ದಿದ್ದು, ವಕೀಲ ಅಶುತೋಷ್ ಶ್ರೀವಾಸ್ತವ್ ಅವರು ಸಿಯಾ ಸಹೋದರ ಸಾಹಿಲ್ ಗೋಯಲ್‌ಗೆ ಬರೋಬ್ಬರಿ 10 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ನೊಟೀಸ್ ಕಳುಹಿಸಿದ್ದಾರೆ.
ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಾಹಿಲ್ ಗೋಯಲ್, ತಮ್ಮ ಕುಟುಂಬವು ವಕೀಲ ಅಶುತೋಷ್ ಶ್ರೀವಾಸ್ತವ್ ಅವರನ್ನು ನೇಮಿಸಿಕೊಂಡಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ವಂಚನೆಯ ಮೂಲಕ ನಮ್ಮ ಸಹೋದರಿ ಸಿಯಾಳಿಂದ ಕಾನೂನು ದಾಖಲೆಗಳಿಗೆ ಶ್ರೀವಾಸ್ತವ್ ಸಹಿ ಹಾಕಿಸಿಕೊಂಡಿರಬಹುದು ಎಂದು ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆಯಿಂದ ತಮ್ಮ ವೃತ್ತಿಪರ ಘನತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿರುವ ವಕೀಲ ಅಶುತೋಷ್ ಶ್ರೀವಾಸ್ತವ್, ಸಾಹಿಲ್ ಹೇಳಿಕೆಗಳು ಆಧಾರರಹಿತ ಮತ್ತು ಸುಳ್ಳು ಎಂದು ಖಂಡಿಸಿದ್ದಾರೆ. ಅಲ್ಲದೆ, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಹಾಗೂ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೊಟೀಸ್‌ನಲ್ಲಿ ಆಗ್ರಹಿಸಿದ್ದಾರೆ.
ನ್ಯಾಯಾಲಯದಲ್ಲಿ ನಡೆದ ಹೈಡ್ರಾಮಾ
ಸೋಮವಾರ ವಡಗಾಂವ್ ಮಾವಲ್ ನ್ಯಾಯಾಲಯದಲ್ಲಿ ಈ ವಿವಾದ ತಾರಕಕ್ಕೇರಿತ್ತು. ತಾನೇ ಸಿಯಾ ಪರ ವಕೀಲ ಎಂದು ಹೇಳಿಕೊಂಡ ಶ್ರೀವಾಸ್ತವ್, ಸಿಯಾ ಸಹಿ ಇದೆ ಎನ್ನಲಾದ ವಕಾಲತ್ತುನಾಮೆಯನ್ನು (vakalatnama) ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ, ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ ಸಿಯಾ, ವಿಪುಲ್ ದುಶಿಂಗ್ ಅವರೇ ತನ್ನ ಅಧಿಕೃತ ವಕೀಲರು ಎಂದು ನ್ಯಾಯಾಧೀಶರ ಮುಂದೆ ಸ್ಪಷ್ಟಪಡಿಸಿದ್ದಳು. ವಿಚಾರಣೆಗೂ ಮುನ್ನ ಮಾತನಾಡಿದ್ದ ಸಾಹಿಲ್ ಗೋಯಲ್, ಶ್ರೀವಾಸ್ತವ್ ಅವರು ಬಲವಂತವಾಗಿ ಸಹಿ ಪಡೆದುಕೊಂಡಿದ್ದು, ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದರು.
ತಮ್ಮ ನಡೆಯನ್ನು ಸಮರ್ಥಿಸಿಕೊಂಡ ವಕೀಲ
ಸಾಹಿಲ್ ಆರೋಪಗಳನ್ನು ತಳ್ಳಿಹಾಕಿರುವ ವಕೀಲ ಅಶುತೋಷ್, ತಮ್ಮ ಕಾನೂನು ತಂಡವು ಸಿಯಾಳನ್ನು ನೇರವಾಗಿ ಭೇಟಿಯಾಗಿತ್ತು. ಸಿಯಾ ವಯಸ್ಕಳಾಗಿದ್ದು, ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ. ಆಕೆಗೆ ಕಾನೂನು ನೆರವಿನ ಅಗತ್ಯವಿದ್ದ ಕಾರಣ, ಸ್ವಇಚ್ಛೆಯಿಂದಲೇ ಬಾಂಬೆ ಹೈಕೋರ್ಟ್‌ವರೆಗೂ ಅನ್ವಯವಾಗುವಂತೆ ನಮ್ಮ ಪರವಾಗಿ ವಕಾಲತ್ತುನಾಮೆಗೆ ಸಹಿ ಹಾಕಿದ್ದಾಳೆ. ನಾವು ಸಾಹಿಲ್ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಪೊಲೀಸ್ ತನಿಖೆ ಚುರುಕು
ಇನ್ನೊಂದೆಡೆ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಆರೋಪಿಗಳಾದ ಸಿಯಾ ಮತ್ತು ಆಕೆಯ ಪ್ರಿಯಕರ ಚೌಧರಿಯನ್ನು ಹೆಚ್ಚಿನ ಅವಧಿಗೆ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯವನ್ನು ಕೋರಿದ್ದಾರೆ. ಅಗರ್ವಾಲ್‌ನನ್ನು ತಳ್ಳುವ ಮುನ್ನ ಆರೋಪಿಗಳು ಲೋಹಗಢ ಕೋಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಡಿಲೀಟ್ ಆಗಿರುವ ಡಿಜಿಟಲ್ ಪುರಾವೆಗಳನ್ನು ಕಲೆಹಾಕುವುದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಹಾಗೂ ಸಿಯಾ ಬಿಸಾಡಿದ್ದಾಳೆ ಎನ್ನಲಾದ ಅಗರ್ವಾಲ್‌ನ ಪಾಸ್‌ಪೋರ್ಟ್ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. 20 ವರ್ಷದ ಸಿಯಾ, ಕೇತನ್‌ನನ್ನು ಮದುವೆಯಾಗುವುದು ಇಷ್ಟವಿಲ್ಲದೆ ತನ್ನ ಪ್ರಿಯಕರ ಚೌಧರಿ ಜೊತೆ ಸೇರಿ, ಕೇತನ್ ಅಗರ್ವಾಲ್‌ನನ್ನು ಪುಣೆ ಜಿಲ್ಲೆಯ ಲೋಹಗಢ ಕೋಟೆಯ ಪ್ರಪಾತಕ್ಕೆ ತಳ್ಳಿ ಕೊಲೆಗೈದಿದ್ದಳು ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ : ತಮಿಳುನಾಡಿನಲ್ಲಿ ಇನ್ಮುಂದೆ ಸರ್ಕಾರಿ ಬಸ್‌ಗಳೆಲ್ಲವೂ ಎಸಿ : ಸಿಎಂ ವಿಜಯ್ ಆದೇಶ


















