ಬೆಂಗಳೂರು : ಚೀನಾದ ಪ್ರಮುಖ ಟೆಕ್ ದೈತ್ಯ ಹುವಾವೇ ತನ್ನ ಬಹುನಿರೀಕ್ಷಿತ ‘ಮೇಟ್ 90 ಸರಣಿ’ (Huawei Mate 90 Series) ಮತ್ತು ಮಡಿಚಬಹುದಾದ (ಫೋಲ್ಡಬಲ್) ಸ್ಮಾರ್ಟ್‌ಫೋನ್ ‘ಮೇಟ್ ಎಕ್ಸ್‌ಟಿ 2’ (Huawei Mate XT 2) ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ಆನ್‌ಲೈನ್‌ನಲ್ಲಿ ಹೊಸ ಮಾಹಿತಿಯೊಂದು ಸೋರಿಕೆಯಾಗಿದ್ದು, ಎಂದಿನ ಕಾರ್ಯಕ್ರಮದ ವೇಳಾಪಟ್ಟಿಗಿಂತ ತುಸು ಮುಂಚಿತವಾಗಿಯೇ ಈ ವರ್ಷ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎಂದು ಅಂದಾಜಿಸಲಾಗಿದೆ.
ಚೀನಾದ ಜನಪ್ರಿಯ ಬ್ಲಾಗಿಂಗ್ ತಾಣ ‘ವೀಬೊ’ (Weibo) ನಲ್ಲಿ ‘ರೂರಿರೆನ್’ (RuryRen) ಎಂಬ ಹೆಸರಿನ ಟಿಪ್ಸ್ಟರ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಹುವಾವೇ ತನ್ನ ಬಹುನಿರೀಕ್ಷಿತ ಮೇಟ್ 90 ಸರಣಿಯನ್ನು ಇದೇ ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಹಕರ ಖರೀದಿಗೆ ಪರಿಚಯಿಸುವ ಸಾಧ್ಯತೆಯಿದೆ. ವಿಶೇಷವೆಂದರೆ, ಹುವಾವೇ ಈ ಬಾರಿ ತನ್ನ ನೂತನ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮೇಟ್ ಎಕ್ಸ್‌ಟಿ 2 ಮತ್ತು ಮೇಟ್ ಎಕ್ಸ್ 8 ಅನ್ನು ಮೇಟ್ 90 ಸರಣಿಯೊಂದಿಗೆ ಒಂದೇ ವೇದಿಕೆಯಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಸಂಸ್ಥೆಯು ತನ್ನೆಲ್ಲಾ ಮಾಡೆಲ್‌ಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈ ಬಾರಿ ವಿಭಿನ್ನ ಕಾರ್ಯಕ್ರಮಗಳಲ್ಲಿ ಪ್ರತ್ಯೇಕವಾಗಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ ಎಂದು ಸೋರಿಕೆಯಾದ ವರದಿಯು ವಿವರಿಸಿದೆ. ಈ ನಡುವೆ ಅಕ್ಟೋಬರ್ ತಿಂಗಳಲ್ಲಿ ಮೇಟ್ ಎಕ್ಸ್‌ಟಿ 2 ಬಿಡುಗಡೆಯಾಗುವ ನಿರೀಕ್ಷೆಯಿದೆ.
ಹೊಸ ಸಂಪ್ರದಾಯಕ್ಕೆ ನಾಂದಿ
ಸಾಮಾನ್ಯವಾಗಿ ಹುವಾವೇ ಸಂಸ್ಥೆಯು ತನ್ನ ‘ಮೇಟ್’ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಂಪ್ರದಾಯವನ್ನು ಹೊಂದಿದೆ. ಉದಾಹರಣೆಗೆ, ಮೇಟ್ 70 ಹಾಗೂ ಮೇಟ್ 80 ಸರಣಿಗಳನ್ನು ಹಿಂದಿನ ವರ್ಷಗಳಲ್ಲಿ ನವೆಂಬರ್ ತಿಂಗಳಲ್ಲೇ ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಆದರೆ, ಈಗ ಸೆಪ್ಟೆಂಬರ್‌ನಲ್ಲಿ ಮೇಟ್ 90 ಸರಣಿಯನ್ನು ಪರಿಚಯಿಸಲು ಮುಂದಾಗಿರುವುದು ತಂತ್ರಜ್ಞಾನ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕ್ವಾಲ್ಕಾಮ್‌ನ ಅತ್ಯಾಧುನಿಕ ಸ್ನಾಪ್‌ಡ್ರ್ಯಾಗನ್ 8 ಎಲೈಟ್ ಜನ್ 6 ಚಿಪ್‌ಸೆಟ್‌ನೊಂದಿಗೆ ಬರಲಿರುವ ಶಿಯೋಮಿ 18 ಸರಣಿ ಹಾಗೂ ಐಕ್ಯೂ 16 ಸ್ಮಾರ್ಟ್‌ಫೋನ್‌ಗಳು ಕೂಡ ಸೆಪ್ಟೆಂಬರ್‌ನಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದಲ್ಲದೆ ಆಪಲ್ ಸಂಸ್ಥೆ ಕೂಡ ತನ್ನ ಬಹುನಿರೀಕ್ಷಿತ ಐಫೋನ್ 18 ಪ್ರೊ ಹಾಗೂ ಐಫೋನ್ 18 ಪ್ರೊ ಮ್ಯಾಕ್ಸ್ ಮೊಬೈಲ್‌ಗಳನ್ನು ಅದೇ ತಿಂಗಳು ಬಿಡುಗಡೆ ಮಾಡಲಿದೆ. ಹೀಗಾಗಿ, ಪ್ರತಿಸ್ಪರ್ಧಿ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುವ ಏಕೈಕ ಉದ್ದೇಶದಿಂದ ಹುವಾವೇ ಮುಂಚಿತವಾಗಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ ಎಂಬುದಾಗಿ ಮಾರುಕಟ್ಟೆಯ ತಜ್ಞರು ವಿಶ್ಲೇಷಿಸಿದ್ದಾರೆ.
ಮತ್ತೊಂದೆಡೆ, ಇದೇ ಟಿಪ್ಸ್ಟರ್ ನೀಡಿರುವ ಇನ್ನೊಂದು ಅಚ್ಚರಿಯ ಮಾಹಿತಿ ಪ್ರಕಾರ, ಹುವಾವೇ ತನ್ನ ‘ಪುರಾ 90ಎಸ್ ಪ್ರೊ’ (Pura 90S Pro) ಹಾಗೂ ‘ಪುರಾ 90ಎಸ್ ಪ್ರೊ ಪ್ಲಸ್’ (Pura 90S Pro+) ಮಾಡೆಲ್‌ಗಳ ಬಿಡುಗಡೆ ಯೋಜನೆಯನ್ನೇ ರದ್ದುಗೊಳಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಮೇಟ್ 80 ಸರಣಿಯ ಸ್ಮಾರ್ಟ್‌ಫೋನ್‌ಗಳಾದ ಮೇಟ್ 80, ಮೇಟ್ 80 ಪ್ರೊ, ಮೇಟ್ 80 ಪ್ರೊ ಮ್ಯಾಕ್ಸ್ ಹಾಗೂ ಮೇಟ್ 80 ಆರ್‌ಎಸ್ ಮಾಸ್ಟರ್ ಎಡಿಷನ್ ಮೊಬೈಲ್‌ಗಳು ಶಕ್ತಿಶಾಲಿ ಕಿರಿನ್ ಚಿಪ್‌ಸೆಟ್, ಬರೋಬ್ಬರಿ 20ಜಿಬಿ RAM ಹಾಗೂ 1ಟಿಬಿ ವರೆಗಿನ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದವು. 6000mAh ಹಾಗೂ 5500mAh ಬ್ಯಾಟರಿ ಸಾಮರ್ಥ್ಯದೊಂದಿಗೆ 100W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡಿದ್ದವು. ಇದೀಗ ಹೊಸ ಮೇಟ್ 90 ಸರಣಿಯಲ್ಲಿ ಹುವಾವೇ ಇನ್ನು ಯಾವೆಲ್ಲಾ ಅತ್ಯಾಧುನಿಕ ಹಾಗೂ ಅಚ್ಚರಿಯ ತಂತ್ರಜ್ಞಾನಗಳನ್ನು ಅಳವಡಿಸಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.
ಇದನ್ನೂ ಓದಿ : ಆಗಸ್ಟ್‌ನಲ್ಲಿ ರಸ್ತೆಗಿಳಿಯಲು ಸಜ್ಜಾದ ಬಹುನಿರೀಕ್ಷಿತ ‘ಸ್ಕೋಡಾ ಸ್ಲಾವಿಯಾ ಫೇಸ್‌ಲಿಫ್ಟ್’!



















