ಚೆನ್ನೈ : ತಮಿಳುನಾಡು ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಖ್ಯಮಂತ್ರಿ ಜೋಸೆಫ್ ವಿಜಯ್ ಮುಂದಾಗಿದ್ದು, ಇನ್ನು ಮುಂದೆ ರಾಜ್ಯ ಸರ್ಕಾರ ಖರೀದಿಸುವ ಎಲ್ಲಾ ಬಸ್‌ಗಳು ಹವಾನಿಯಂತ್ರಿತ (AC) ಆಗಿರಲಿವೆ ಎಂದು ಸಾರಿಗೆ ಸಚಿವ ವಿಜಯ್ ತಮಿಳನ್ ಪಾರ್ಥಿಬನ್ ತಿಳಿಸಿದ್ದಾರೆ. ಸಾರ್ವಜನಿಕರು ಹೆಚ್ಚು ಮತ್ತು ಆರಾಮದಾಯಕವಾಗಿ ಪ್ರಯಾಣಿಸಬೇಕು ಎಂಬ ಮುಖ್ಯಮಂತ್ರಿ ವಿಜಯ್ ಅವರ ಆಶಯದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಭಾನುವಾರ ಸೇಲಂನಲ್ಲಿ ಆಡಳಿತಾರೂಢ ಟಿವಿಕೆ (TVK) ಪಕ್ಷದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಮಿಳುನಾಡಿನ ಪ್ರತಿಯೊಂದು ಕುಗ್ರಾಮವೂ ಬಸ್ ಜಾಲದ ಮೂಲಕ ಸಂಪರ್ಕ ಹೊಂದಿರಬೇಕು ಎಂಬುದು ಸಿಎಂ ವಿಜಯ್ ಅವರ ದೃಷ್ಟಿಕೋನವಾಗಿದೆ ಎಂದರು. ಇತ್ತೀಚೆಗಷ್ಟೇ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದ ಮುಖ್ಯಮಂತ್ರಿಗಳು, ತಾವೂ ಸೇರಿದಂತೆ ಪ್ರತಿಯೊಬ್ಬ ಸಾಮಾನ್ಯ ನಾಗರಿಕನೂ ಆರಾಮದಾಯಕವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ಇನ್ನು ಮುಂದೆ ಖರೀದಿಸುವ ಪ್ರತಿಯೊಂದು ಹೊಸ ಬಸ್‌ನಲ್ಲೂ ಎಸಿ ಸೌಲಭ್ಯ ಕಡ್ಡಾಯವಾಗಿರಬೇಕು ಎಂದು ಸೂಚಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಇತ್ತೀಚೆಗಷ್ಟೇ 300 ಹೊಸ ಬಸ್‌ಗಳಿಗೆ ಚಾಲನೆ
ಕಳೆದ ವಾರವಷ್ಟೇ ಮುಖ್ಯಮಂತ್ರಿ ವಿಜಯ್ ಅವರು ರಾಜ್ಯಾದ್ಯಂತ ಸಂಚರಿಸಲಿರುವ 300 ಹೊಸ ಬಸ್‌ಗಳಿಗೆ ಹಸಿರು ನಿಶಾನೆ ತೋರಿದ್ದರು. ಈ ವೇಳೆ ಬಸ್ ನಿರ್ವಾಹಕರೊಂದಿಗೂ ಅವರು ಮಾತುಕತೆ ನಡೆಸಿದ್ದರು. ಒಟ್ಟು 127.21 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾದ ಈ ಹೊಸ ಬಸ್‌ಗಳ ಪೈಕಿಯಲ್ಲಿ 164 ಡೀಸೆಲ್ ಮತ್ತು 136 ಬಿಎಸ್-6 (BS-VI) ಮಾದರಿಯ ಸಿಎನ್‌ಜಿ (CNG) ಬಸ್‌ಗಳು ಸೇರಿವೆ.
ಪ್ರಯಾಣಿಕರ ಕಾಯುವಿಕೆ ಸಮಯವನ್ನು ಕಡಿಮೆ ಮಾಡಲು ಮತ್ತು ಸಂಪರ್ಕವನ್ನು ಹೆಚ್ಚಿಸಲು ಈ ಬಸ್‌ಗಳನ್ನು ಕೋಯಂಬೇಡು ಮತ್ತು ಕಿಲಾಂಬಕ್ಕಂನಂತಹ ಪ್ರಮುಖ ಸಾರಿಗೆ ಕೇಂದ್ರಗಳಿಂದ ತಕ್ಷಣವೇ ಕಾರ್ಯಾಚರಣೆಗೆ ಇಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಹಿರಿಯ ಸಚಿವರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ‘ನಮ್ಮ ನೀರಿನ ಪಾಲು ತಡೆದರೆ ಕೈ ಕತ್ತರಿಸುತ್ತೇವೆ’ – ಭಾರತಕ್ಕೆ ಪಾಕಿಸ್ತಾನದ ಉದ್ಧಟತನದ ಬೆದರಿಕೆ!



















