ಮಂಗಳೂರು : ಮಂಗಳೂರಿನ ಬೈಕಂಪಾಡಿಯಲ್ಲಿ ತಡರಾತ್ರಿ 2.15ರ ಸುಮಾರಿಗೆ ಸಿನಿಮಾ ಶೈಲಿಯಲ್ಲಿ ದರೋಡೆ ನಡೆದಿದೆ. ಚಿನ್ನದ ವ್ಯಾಪಾರಿಯ ಕಾರನ್ನು ಹೆದ್ದಾರಿಯಲ್ಲೇ ಅಡ್ಡಗಟ್ಟಿ, ಚಿನ್ನ ಮತ್ತು ನಗದು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮಂಗಳೂರಿನ ಸುರತ್ಕಲ್ ಸಮೀಪದ ಬೈಕಂಪಾಡಿ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕೇರಳದ ಪಯ್ಯನ್ನೂರು ಮೂಲದ ಚಿನ್ನದ ವ್ಯಾಪಾರಿ ವಿಕಾಸ್, ಕುಟುಂಬದೊಂದಿಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಸ್ವಿಫ್ಟ್ ಕಾರಿನಲ್ಲಿ ಮರಳುತ್ತಿದ್ದರು.
ಉಡುಪಿ ಕಡೆಯಿಂದ ಮಂಗಳೂರು ಕಡೆ ಬರುತ್ತಿದ್ದ ವೇಳೆ, ಬೈಕಂಪಾಡಿ ಬಳಿ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಕಾರನ್ನು ಅಡ್ಡಗಟ್ಟಿ ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಿದ್ದಾರೆ. ನಂತರ ದರೋಡೆಕೋರರೊಬ್ಬನೇ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಆ ವೇಳೆ ಕಾರಿನಲ್ಲಿದ್ದ ವಿಕಾಸ್ ಅವರ ಪತ್ನಿ ಮತ್ತು ಪುತ್ರನನ್ನೂ ಬೆದರಿಸಿ ಕಾರಿನಲ್ಲೇ ಕರೆದೊಯ್ಯಲಾಗಿದೆ.
ನಂತರ ಕುಳೂರು ಸಮೀಪ ಇಬ್ಬರನ್ನೂ ಕಾರಿನಿಂದ ಇಳಿಸಿ, ಕಾರಿನಲ್ಲಿದ್ದ ಚಿನ್ನ ಮತ್ತು ನಗದಿನೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದು ದೋಚಲಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ ಈ ದರೋಡೆ ಪ್ರಕರಣದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಇದನ್ನೂ ಓದಿ : ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ – 21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ.. ಮೂವರು ವಿದೇಶಿಗರ ಬಂಧನ!


















