ಬೆಂಗಳೂರು : ಕುಡಿದ ಮತ್ತಲ್ಲಿ ಲಾರಿಯನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದ ಚಾಲಕನನ್ನು ಸಾರ್ವಜನಿಕರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮಾಹಿತಿಯ ಪ್ರಕಾರ, ಲಾರಿ ಚಾಲಕ ಕಂಠಪೂರ್ತಿ ಮದ್ಯ ಸೇವಿಸಿ ನಶೆಯಲ್ಲೇ ವಾಹನ ಚಲಾಯಿಸುತ್ತಿದ್ದನು. ಟೌನ್‌ಗೆ ಪ್ರವೇಶಿಸುವ ಮುನ್ನವೇ ಅವನ ಅನುಮಾನಾಸ್ಪದ ಚಾಲನೆಯನ್ನು ಗಮನಿಸಿದ ವಾಹನ ಸವಾರರು ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.
ಲಾರಿ ನಿಂತ ತಕ್ಷಣ ಕೆಳಗಿಳಿದ ಚಾಲಕ, ಸ್ಥಳೀಯರೊಂದಿಗೆ ವಾಗ್ವಾದ ನಡೆಸಿ ಹೈಡ್ರಾಮಾ ಸೃಷ್ಟಿಸಿದ್ದು, ನಶೆಯಲ್ಲಿದ್ದ ಆತ ನಡುರಸ್ತೆಯಲ್ಲೇ ಬಿದ್ದು ಉರುಳಾಡುತ್ತಾ ಕಿರುಚಾಡಿದ್ದಾನೆ.
ಚಾಲಕನ ವರ್ತನೆ ಕಂಡ ಸಾರ್ವಜನಿಕರು ಆತನನ್ನು ಹಿಡಿದು ಆನೇಕಲ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದ್ದು, ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಹೈಟೆಕ್ ಇ-ಖಾತಾ ದಂಧೆ ಬಯಲು ; ಕೆಂಗೇರಿ ಉಪ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ N.R ರಮೇಶ್ ಆಗ್ರಹ!



















