ಬೆಂಗಳೂರು : ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಆರಂಭಿಕ ದಿನಗಳಲ್ಲಿ ಮಂಕಾಗಿದ್ದ ಫ್ರೆಂಚ್ ಕಾರು ತಯಾರಕ ಸಂಸ್ಥೆ ‘ಸಿಟ್ರನ್’, ಇದೀಗ ಹೊಸ ಕಾರ್ಯತಂತ್ರದೊಂದಿಗೆ ಕಮ್‌ಬ್ಯಾಕ್ ಮಾಡಿದೆ. ಗ್ರಾಹಕರ ನಿರೀಕ್ಷೆಗಳನ್ನು ಅರಿತುಕೊಳ್ಳುವಲ್ಲಿ ವಿಫಲವಾಗಿ ಟೀಕೆಗೆ ಗುರಿಯಾಗಿದ್ದ ಸಂಸ್ಥೆ, ಇದೀಗ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ‘ಸಿ3’ಯ ನವೀಕೃತ ಆವೃತ್ತಿಯಾದ ‘ಸಿಟ್ರನ್ ಸಿ3ಎಕ್ಸ್’ (Citroen C3X) ಅನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ವಾಹನ ಪ್ರಿಯರ ಗಮನ ಸೆಳೆಯುತ್ತಿದೆ.
ಬಿಡುಗಡೆಯಾಗಿರುವ ಹೊಸ ಮಾದರಿಯು ಕೇವಲ ವಿನ್ಯಾಸದಲ್ಲಿ ಮಾತ್ರವಲ್ಲದೆ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸಂಸ್ಥೆಯು ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ಹೊಸ ಟಿವಿ ಜಾಹೀರಾತು (TVC) ಕೂಡ ಗ್ರಾಹಕರ ಗಮನ ಸೆಳೆಯುತ್ತಿದ್ದು, ಅದರಲ್ಲಿ ತನ್ನ ವಿಶಿಷ್ಟವಾದ ‘ಮ್ಯಾಜಿಕ್ ಕಾರ್ಪೆಟ್ ರೈಡ್’ (ಅತ್ಯುತ್ತಮ ಸಸ್ಪೆನ್ಷನ್) ಅನ್ನು ಅಚ್ಚುಕಟ್ಟಾಗಿ ಹೈಲೈಟ್ ಮಾಡಲಾಗಿದೆ.
ಹೊಸ ಮಾದರಿಯ ಜಾಹೀರಾತು
ವಾಹನದ ಸಸ್ಪೆನ್ಷನ್ ಮಹತ್ವವನ್ನು ವಿವರಿಸುವ ಈ ಹೊಸ ಜಾಹೀರಾತಿನಲ್ಲಿ, ಹದಗೆಟ್ಟ ರಸ್ತೆಯಲ್ಲಿ ಹಳೆಯ ಕಾರಿನಲ್ಲಿ ಪ್ರಯಾಣಿಸುವ ಕುಟುಂಬವೊಂದು ಪಡುವ ಪರದಾಟವನ್ನು ಚಿತ್ರಿಸಲಾಗಿದೆ. ಗುಂಡಿಬಿದ್ದ ರಸ್ತೆಗಳಿಂದ ಹೈರಾಣಾಗುವ ಆ ಕುಟುಂಬ, ಬಳಿಕ ಸಿಟ್ರನ್ ಸಿ3ಎಕ್ಸ್ ಕಾರೇರಿ ಅದೇ ರಸ್ತೆಯಲ್ಲಿ ಅತ್ಯಂತ ಸುಗಮವಾಗಿ ಹಾಗೂ ಆರಾಮದಾಯಕವಾಗಿ ಪ್ರಯಾಣ ಬೆಳೆಸುವುದನ್ನು ಅತ್ಯಂತ ಆಕರ್ಷಕವಾಗಿ ತೋರಿಸಲಾಗಿದೆ. ಭಾರತೀಯ ರಸ್ತೆಗಳಿಗೆ ಹೇಳಿಮಾಡಿಸಿದಂತಿರುವ ಸಿಟ್ರನ್ ಕಾರುಗಳ ಸಸ್ಪೆನ್ಷನ್ ವ್ಯವಸ್ಥೆಯು ಈ ವಿಭಾಗದಲ್ಲಿಯೇ ಅತ್ಯುತ್ತಮವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೊಸ ಮಾದರಿಯಲ್ಲೂ ಈ ಗುಣಮಟ್ಟವನ್ನು ಅಷ್ಟೇ ಕಾಳಜಿಯಿಂದ ಕಾಯ್ದುಕೊಳ್ಳಲಾಗಿದೆ.
ನವೀಕೃತ ಸಿಟ್ರನ್ ಸಿ3ಎಕ್ಸ್ ಕಾರು, ತನ್ನ ಹಿಂದಿನ ಮಾದರಿಗಿಂತ ಬರೋಬ್ಬರಿ ೧೫ ಹೊಸ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಭರ್ಜರಿಯಾಗಿ ಮಾರುಕಟ್ಟೆ ಪ್ರವೇಶಿಸಿದೆ. ಇದರ ಪ್ರಮುಖ ಆಕರ್ಷಣೆಯಾಗಿ ‘ಪ್ರಾಕ್ಸಿ-ಸೆನ್ಸ್ ಪ್ಯಾಸಿವ್ ಎಂಟ್ರಿ ಹಾಗೂ ಪುಶ್-ಸ್ಟಾರ್ಟ್ ಸಿಸ್ಟಮ್’ ನೀಡಲಾಗಿದ್ದು, ಇದು ಮಾಡರ್ನ್ ಸ್ಮಾರ್ಟ್ ಕೀಯ ಸಾಮೀಪ್ಯದ ಆಧಾರದ ಮೇಲೆ ಕಾರನ್ನು ಸ್ವಯಂಚಾಲಿತವಾಗಿ ಲಾಕ್ ಹಾಗೂ ಅನ್‌ಲಾಕ್ ಮಾಡುವ ವ್ಯವಸ್ಥೆ ಹೊಂದಿದೆ.
ಇದಲ್ಲದೆ, ಆಟೋಮ್ಯಾಟಿಕ್ ಮಾದರಿಗಳಲ್ಲಿ ಈ ಮಾರುಕಟ್ಟೆ ವಿಭಾಗದಲ್ಲೇ ಮೊದಲೆನ್ನಲಾದ ‘ಕ್ರೂಸ್ ಕಂಟ್ರೋಲ್’, ಏಳು ವಿಭಿನ್ನ ಕೋನಗಳ ವೀಕ್ಷಣೆಗೆ ಹಾಗೂ ಪಾರ್ಕಿಂಗ್‌ಗೆ ಸಹಾಯ ಮಾಡುವ ಹ್ಯಾಲೊ 360-ಡಿಗ್ರಿ ಕ್ಯಾಮೆರಾ, ಮಂಕಾಗುವ ಆಂತರಿಕ ರಿಯರ್ ವ್ಯೂ ಮಿರರ್ (Auto-dimming IRVM), ಹಾಗೂ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಫಾಗ್ ಲ್ಯಾಂಪ್-ಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಎಲ್‌ಇಡಿ ಲೈಟಿಂಗ್ ವ್ಯವಸ್ಥೆಯನ್ನು ಒದಗಿಸಲಾಗಿದೆ. ಕ್ಯಾಬಿನ್ ಒಳಾಂಗಣದಲ್ಲಿ 10.25-ಇಂಚಿನ ಅತ್ಯಾಧುನಿಕ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದ್ದು, ಇದು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯ್ಡ್ ಆಟೋವನ್ನು ಬೆಂಬಲಿಸುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಲೆದರ್ ಫಿನಿಶ್ ಹೊಂದಿರುವ ಡ್ಯಾಶ್‌ಬೋರ್ಡ್ ಮತ್ತು ಹಿಂದಿನ ಸೀಟಿನ ಪ್ರಯಾಣಿಕರಿಗಾಗಿ ಪ್ರತ್ಯೇಕ ಯುಎಸ್‌ಬಿ ಟೈಪ್-ಸಿ ಪೋರ್ಟ್ ಕೂಡ ಅಳವಡಿಸಲಾಗಿದೆ.
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಲೂ ಸಿಟ್ರನ್ ಸಿ3ಎಕ್ಸ್ ಅತ್ಯುನ್ನತ ಮಟ್ಟದ ಭದ್ರತೆ ಒದಗಿಸುತ್ತಿದೆ. ಎಲ್ಲಾ ಆವೃತ್ತಿಗಳಲ್ಲೂ ಭದ್ರತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ವಾಹನ ನಿಯಂತ್ರಣ ತಪ್ಪದಂತೆ ತಡೆಯಲು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್ (ESP), ಇಬಿಡಿ ಹೊಂದಿರುವ ಎಬಿಎಸ್, ಹಿಲ್ ಹೋಲ್ಡ್ ಅಸಿಸ್ಟ್ (ಬೆಟ್ಟ ಗುಡ್ಡಗಳ ರಸ್ತೆಯಲ್ಲಿ ಸುಲಭ ಸಂಚಾರಕ್ಕೆ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಹಾಗೂ ಐಸೋಫಿಕ್ಸ್ ಚೈಲ್ಡ್-ಸೀಟ್ ಆ್ಯಂಕರ್‌ಗಳನ್ನು ಈ ಕಾರು ಹೊಂದಿದೆ. ಇಂಜಿನ್ ಸಾಮರ್ಥ್ಯದ ಕುರಿತು ಹೇಳುವುದಾದರೆ, ಗ್ರಾಹಕರಿಗೆ ಎರಡು ಪ್ರಮುಖ ಆಯ್ಕೆಗಳು ಲಭ್ಯವಿವೆ. 1.2-ಲೀಟರ್ ನ್ಯಾಚುರಲಿ ಅಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಹಾಗೂ 1.2-ಲೀಟರ್ ಟರ್ಬೊ-ಪೆಟ್ರೋಲ್ ಇಂಜಿನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ 5-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಗಳನ್ನು ನೀಡಲಾಗಿದೆ. ಅತ್ಯಾಧುನಿಕ ಫೀಚರ್ಸ್‌ಗಳಿಂದ ಕೂಡಿರುವ ಈ ಅದ್ಭುತ ಹೆಚ್‌ಬ್ಯಾಕ್ ಕಾರಿನ ಬೆಲೆಯು ಆಕರ್ಷಕವಾಗಿದ್ದು, ಎಕ್ಸ್‌ಶೋರೂಂ ದರದಂತೆ 4.99 ಲಕ್ಷ ರೂಪಾಯಿಗಳಿಂದ ಆರಂಭವಾಗಿ ಆಟೋಮ್ಯಾಟಿಕ್ ಟಾಪ್-ಎಂಡ್ ಮಾದರಿಗೆ 9.31 ಲಕ್ಷ ರೂಪಾಯಿಗಳವರೆಗೆ ನಿಗದಿಯಾಗಿದೆ.
ಇದನ್ನೂ ಓದಿ : ಐಕಾನಿಕ್ SUV ಮರುಹುಟ್ಟು – ಟಾಟಾ ಸಿಯೆರಾ ಇವಿ ಜೂ.30ರಂದು ಅಧಿಕೃತವಾಗಿ ಅನಾವರಣ!


















