ಪುಣೆ: ನವೆಂಬರ್‌ನಲ್ಲಿ ನಡೆಯಬೇಕಿದ್ದ ಮದುವೆಗೆ ಬರೋಬ್ಬರಿ 17 ಕೋಟಿ ರೂ. ವೆಚ್ಚದಲ್ಲಿ ರಾಜಸ್ಥಾನದ ಅರಮನೆಯನ್ನೇ ಬುಕ್ ಮಾಡಲಾಗಿತ್ತು, ಅತಿಥಿಗಳನ್ನು ಕರೆತರಲು ಎರಡು ಖಾಸಗಿ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಒಂದಿನಿತೂ ಅನುಮಾನ ಬಾರದಂತೆ ಪ್ರೀತಿಯ ಮಹಾಪೂರವನ್ನೇ ಹರಿಸಿದ್ದ ಆಕೆ, ಕೊನೆಗೆ ತನ್ನ ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನೇ 400 ಅಡಿ ಆಳದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಳು. ಹೌದು, ಮಹಾರಾಷ್ಟ್ರದ ಪುಣೆಯ ಲೋಹಗಢ ಕೋಟೆಯಲ್ಲಿ ಜೂನ್ 18 ರಂದು ನಡೆದಿದ್ದ ಯುವ ಉದ್ಯಮಿ ಕೇತನ್ ಅಗರ್ವಾಲ್ ಅವರ ಭೀಕರ ಹತ್ಯೆಯ ಸುರುಳಿ ಈಗ ಬಿಚ್ಚಿಕೊಂಡಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಕೊಲೆಯಾದ ಯುವಕ ಪುಣೆಯ ಗಾಹುಂಜೆಯ ನಿವಾಸಿ, ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಅವರ ಪುತ್ರ ಕೇತನ್ ಅಗರ್ವಾಲ್ (26). ಈತನಿಗೆ ಬೇಕರಿ ಉದ್ಯಮ ನಡೆಸುತ್ತಿದ್ದ ಸಿಯಾ ಗೋಯಲ್ ಎಂಬಾಕೆಯೊಂದಿಗೆ ಕಳೆದ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥವಾಗಿತ್ತು. ನವೆಂಬರ್‌ನಲ್ಲಿ ಜೈಪುರದ ಅರಮನೆಯೊಂದರಲ್ಲಿ ಮದುವೆ ನಿಶ್ಚಯವಾಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ದಿನದೂಡುತ್ತಾ ರೋಮ್ಯಾಂಟಿಕ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಸಿಯಾ, ಒಳಗೊಳಗೇ ಕೇತನ್‌ನನ್ನು ಮುಗಿಸಲು ಸಂಚು ರೂಪಿಸಿದ್ದಳು.
ಆಕೆಗೆ ಡ್ರೈ ಫ್ರೂಟ್ಸ್ ಉದ್ಯಮ ನಡೆಸುತ್ತಿದ್ದ ಚೇತನ್ ಬಾಬುಲಾಲ್ ಚೌಧರಿ (22) ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು. ಮದುವೆಗೆ ಕೇತನ್ ಅಡ್ಡಿಯಾಗುತ್ತಾನೆಂದು ಭಾವಿಸಿದ ಇಬ್ಬರೂ ಆತನನ್ನು ಮುಗಿಸಲು ನಿರ್ಧರಿಸಿದ್ದರು.
ಬಾಲಿ ಪ್ರವಾಸಕ್ಕೆ ಅಡ್ಡಿ, ಪಾಸ್‌ಪೋರ್ಟ್ ಕಳವು
ಕೇತನ್ ಹತ್ಯೆಗೂ ಮುನ್ನವೇ ಸಿಯಾ ಹಲವು ಬಾರಿ ಆತನನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಜೂನ್ 6 ರಂದು ಇವರಿಬ್ಬರೂ ಪ್ರೀ-ವೆಡ್ಡಿಂಗ್ ಶೂಟ್‌ಗಾಗಿ ಇಂಡೋನೇಷ್ಯಾದ ಬಾಲಿಗೆ ತೆರಳಲು ನಿರ್ಧರಿಸಿದ್ದರು. ಒಟ್ಟು 4 ಮಂದಿ ಬಾಲಿಗೆ ತೆರಳಲು ಸಿದ್ಧತೆ ನಡೆಸಿದ್ದರು. ಮುಂಬೈ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಎಲ್ಲರ ಪಾಸ್‌ಪೋರ್ಟ್‌ಗಳನ್ನು ಒಂದೇ ಬ್ಯಾಗ್‌ನಲ್ಲಿ ಇಡಲಾಗಿತ್ತು. ಆದರೆ ದಾರಿಯ ಮಧ್ಯೆ ಎಲ್ಲರೂ ಮಾಲ್‌ವೊಂದಕ್ಕೆ ತೆರಳಿದ್ದರು. ಎಲ್ಲರೂ ಮಾಲ್ ಒಳಗಿದ್ದಾಗ ಸಿಯಾ ತನ್ನ ಮೊಬೈಲ್ ಮರೆತಿದ್ದೇನೆಂದು ಹೇಳಿ ಕಾರಿನ ಬಳಿ ಒಬ್ಬಳೇ ಹೋಗಿ ಬಂದಿದ್ದಳು. ವಿಮಾನ ನಿಲ್ದಾಣ ತಲುಪಿದಾಗ ಕೇವಲ ಕೇತನ್ ಪಾಸ್‌ಪೋರ್ಟ್ ಮಾತ್ರ ನಾಪತ್ತೆಯಾಗಿತ್ತು. ಇದರಿಂದಾಗಿ ಆತನ ಪ್ರವಾಸ ರದ್ದಾಗಿ ವಾಪಸ್ ಬರಬೇಕಾಯಿತು. ಇದು ಸಿಯಾಳ ಮೊದಲ ಸಂಚಾಗಿತ್ತು ಎಂದು ಕೇತನ್ ತಂದೆ ವಿಶಾಲ್ ಅಗರ್ವಾಲ್ ದೂರಿದ್ದಾರೆ.
ಕೊಲೆಗೆ ನಡೆಸಿದ ಮೊದಲ ಯತ್ನ ವಿಫಲ: ‘ಹಾವು ಹಾವು’ ಎಂಬ ನಾಟಕ
ಬಾಲಿ ಪ್ರವಾಸ ರದ್ದಾದ ಬೆನ್ನಲ್ಲೇ ಜೂನ್ 14 ರಂದು ಸಿಯಾ ಹಠ ಹಿಡಿದು ಕೇತನ್‌ನನ್ನು ಲೋಹಗಢ ಕೋಟೆಗೆ ಕರೆದೊಯ್ದಿದ್ದಳು. ಅಲ್ಲಿ ಇಬ್ಬರೇ ಇದ್ದಾಗ ಕೇತನ್‌ನನ್ನು ಕೋಟೆಯಿಂದ ಕೆಳಗೆ ತಳ್ಳಿದ್ದಳು. ಆದರೆ ಅದೃಷ್ಟವಶಾತ್ ಕೇತನ್ ಕಂದಕದ ಬದಿಯಲ್ಲಿದ್ದ ಪೊದೆಯೊಂದನ್ನು ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದ. ತಾನು ತಳ್ಳಿದ ರಹಸ್ಯ ಬಯಲಾಗಬಹುದು ಎಂದು ಹೆದರಿದ ಸಿಯಾ, ತಕ್ಷಣವೇ ‘ಹಾವು, ಹಾವು’ ಎಂದು ಕಿರುಚಾಡಿ ಕೇತನ್‌ನನ್ನು ತಬ್ಬಿಕೊಂಡು ನಾಟಕವಾಡಿದ್ದಳು. ಮೂರ್ಛೆ ತಪ್ಪಿದ್ದ ಕೇತನ್ ಪ್ರಜ್ಞೆ ಬಂದಾಗ ತನ್ನನ್ನು ಆಕೆಯೇ ತಳ್ಳಿದ್ದಾಳೆ ಎಂಬ ಸಂಶಯ ಬಂದರೂ ಸಿಯಾಳ ನಾಟಕದ ಮುಂದೆ ಆತನಿಗೆ ನೈಜ ವಿಚಾರ ಅರಿವಾಗಲೇ ಇಲ್ಲ.
ಜೂನ್ 18ರಂದು ನಡೆದ ಭೀಕರ ಅಂತ್ಯ
ಜೂನ್ 14ರ ಸಂಚು ವಿಫಲವಾದ ಕಾರಣ, ಜೂನ್ 18ರಂದು ಸಿಯಾ ಮತ್ತೊಮ್ಮೆ ಕೇತನ್‌ನನ್ನು ಅದೇ ಕೋಟೆಗೆ ಪ್ರವಾಸದ ನೆಪದಲ್ಲಿ ಕರೆತಂದಿದ್ದಳು. ಈ ಬಾರಿ ಆಕೆಯ ಪ್ರಿಯಕರ ಚೇತನ್ ಚೌಧರಿ ಹೂಡಿ ಧರಿಸಿ ಇವರನ್ನು ಹಿಂಬಾಲಿಸಿದ್ದ. ಇಬ್ಬರೂ ಸೇರಿ ಕೇತನ್‌ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಆರಂಭದಲ್ಲಿ ಕೇತನ್ ಫೋಟೋ ತೆಗೆಯುತ್ತಿದ್ದಾಗ ಭಾರೀ ಗಾಳಿಯಿದ್ದ ಕಾರಣ ಆಯತಪ್ಪಿ ಬಿದ್ದಿದ್ದಾನೆ ಎಂದು ಸಿಯಾ ಲೋನಾವಾಲಾ ಗ್ರಾಮಾಂತರ ಪೊಲೀಸರಿಗೆ ಸುಳ್ಳು ಕಥೆ ಹೇಳಿ ಪ್ರಕರಣದ ದಾರಿ ತಪ್ಪಿಸಿದ್ದಳು.
ಕಣ್ಣೀರೇ ಬಾರದ ಪ್ರೇಯಸಿ; ಬಯಲಾಯ್ತು ರಹಸ್ಯ
ಘಟನೆಯ ನಂತರ ಸಿಯಾಳ ವರ್ತನೆಯಲ್ಲಿ ಯಾವುದೇ ದುಃಖ ಕಾಣಿಸದ ಕಾರಣ ಪೊಲೀಸರಿಗೆ ತೀವ್ರ ಅನುಮಾನ ಮೂಡಿತು. ಪೊಲೀಸರು ತಾಂತ್ರಿಕ ತನಿಖೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಿಯಕರ ಚೇತನ್ ಅವರನ್ನು ಹಿಂಬಾಲಿಸುತ್ತಿದ್ದುದು ಪತ್ತೆಯಾಯಿತು. ಜೊತೆಗೆ ಕಳೆದ 7 ತಿಂಗಳುಗಳಲ್ಲಿ ಸಿಯಾ ಮತ್ತು ಚೇತನ್ ಬರೋಬ್ಬರಿ 2,004 ಬಾರಿ ಫೋನ್‌ನಲ್ಲಿ ಮಾತನಾಡಿ, 238 ಗಂಟೆಗಳ ಕಾಲ ಸಂಭಾಷಣೆ ನಡೆಸಿರುವುದು ಕಾಲ್ ರೆಕಾರ್ಡ್ಸ್‌ನಿಂದ ಸಾಬೀತಾಗಿದೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರನ್ನೂ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 7 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.



















