ಹುಬ್ಬಳ್ಳಿ : ಮುಂಗಾರು ಮಳೆ ಕೈ ಕೊಟ್ಟ ಹಿನ್ನಲೆಯಲ್ಲಿ ಬೆಳೆಗಳು ಮೊಳಕೆಯ ಹಂತದಲ್ಲಿಯೇ ಸಾಯುತ್ತಿವೆ ಎಂದು ಅನ್ನದಾತರು ಕಣ್ಣೀರು ಹಾಕುತ್ತಿರುವ ಘಟನೆ ಹುಬ್ಬಳ್ಳಿಯ ಕುಂದಗೋಳ ತಾಲೂಕಿನಲ್ಲಿ ನಡೆದಿದೆ.
ಆರಂಭದಲ್ಲಿ ಅಲ್ಪ ಮಳೆಗೆ ಬಿತ್ತನೆ ಮಾಡಿದ್ದ ರೈತರು ನಂತರದಲ್ಲಿ ಮಳೆ ಬಾರದೇ ಬೆಳೆಗಳು ಸಾಯುತ್ತಿವೆ ಎಂದು ಕಂಗಾಲಾಗಿದ್ದಾರೆ. ಇದರಿಂದ ಬೇಸತ್ತ ರೈತ ಸಮುದಾಯ ಮಳೆರಾಯನ ಕೃಪೆಗಾಗಿ ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಜೈನ ತೀರ್ಥಂಕರರು ಸೇರಿ ವಿವಿಧ ಸಮುದಾಯದವರು ದೇವರ ಮೊರೆ ಹೋಗಿದ್ದಾರೆ.
ವರುಣನಿಗಾಗಿ ಹೋಮ, ಹವನ, ಪೂಜೆ ನೆರವೇರಿಸಿದ್ದು, ಭೂಮಿ ಬಾಯ್ಬಿಟ್ಟು, ಬೆಳೆ ಒಣಗಿರುವುದಕ್ಕೆ ಆತಂಕ ಹೊರ ಹಾಕಿದ್ದಾರೆ. ಹುಯ್ಯೋ.. ಹುಯ್ಯೋ.. ಮಳೆರಾಯ ಅಂತ ದೇವರ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಾಲ ಮಾಡಿ ಹೊಲದಲ್ಲಿ ಬಿತ್ತನೆ ಮಾಡಲಾಗಿದೆ ಪೈರು ಬೆಳೆಯುವ ಹಂತದಲ್ಲಿ ಮಳೆ ಕೈಕೊಟ್ಟಿದೆ. ಇದೇ ಸ್ಥಿತಿ ಮುಂದುವರಿದಲ್ಲಿ ಬೆಳೆ ಸಂಪೂರ್ಣ ನಾಶವಾಗುತ್ತೆ ಎಂದು ದುಃಖ ತೋಡಿಕೊಂಡಿದ್ದಾರೆ.
ಆದಷ್ಟು ಬೇಗ ಮಳೆ ಬಂದರೆ ಅನುಕೂಲವಾಗುತ್ತದೆ. ಇಲ್ಲದಿದ್ದಲ್ಲಿ ಹಾಕಿದ ಬಂಡವಾಳವೂ ನಷ್ಟ ಎಂದು ರೈತರು ಬೇಸರ ಹೊರ ಹಾಕಿದ್ದಾರೆ. ಸರ್ಕಾರ, ಹಾನಿಯಾಗ್ತಿರೋ ಬೆಳೆಯ ಸಮೀಕ್ಷೆ ಮಾಡಬೇಕು. ಆದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಚಲಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ : ಚಾಲಕ ಜಸ್ಟ್ ಮಿಸ್!


















