ಅಯೋಧ್ಯೆ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮಂದಿರಕ್ಕೆ ಭಕ್ತರು ಅರ್ಪಿಸಿದ ಚಿನ್ನ, ಬೆಳ್ಳಿ, ವಜ್ರಾಭರಣಗಳು ಹಾಗೂ ನಗದು ಕಾಣಿಕೆ, ದೇಣಿಗೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಮಹತ್ತರ ಪುರಾವೆಗಳನ್ನು ಕಲೆಹಾಕಿದೆ. ಅಯೋಧ್ಯೆಯಲ್ಲಿ ಸತತ ಆರು ದಿನಗಳ ಕಾಲ ತೀವ್ರ ತನಿಖೆ ನಡೆಸಿರುವ ಎಸ್‌ಐಟಿ, ತನ್ನ ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿಸಿಟಿವಿ ದೃಶ್ಯಾವಳಿಗಳು ಧ್ವಂಸ
ಎಸ್‌ಐಟಿ ಅಧಿಕಾರಿಗಳು ಪರಿಶೀಲಿಸಿದ ಸಿಸಿಟಿವಿ ದೃಶ್ಯಾವಳಿಗಳು ಭಕ್ತರು ಕಾಣಿಕೆ ಪೆಟ್ಟಿಗೆಗೆ ಹಾಕಿದ ಹಣವನ್ನು ಎಣಿಕೆ ಮಾಡುವ ಸಂದರ್ಭದಲ್ಲಿ ನಡೆದಿರುವ ಅವ್ಯವಹಾರಗಳನ್ನು ದೃಢಪಡಿಸಿವೆ ಎನ್ನಲಾಗಿದೆ. ಅಕ್ರಮವನ್ನು ಮುಚ್ಚಿಹಾಕುವ ಉದ್ದೇಶದಿಂದಲೇ ಕೆಲವು ಪ್ರಮುಖ ಸಿಸಿಟಿವಿ ದೃಶ್ಯಾವಳಿಗಳನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ. ಕೇವಲ ನಿರ್ಲಕ್ಷ್ಯವಷ್ಟೇ ಅಲ್ಲದೆ, ಇದರ ಹಿಂದೆ ವ್ಯವಸ್ಥಿತ ಪಿತೂರಿ ನಡೆದಿರುವ ಕೋನದಲ್ಲೂ ತನಿಖೆ ಚುರುಕುಗೊಂಡಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು, ಮ್ಯಾನೇಜ್‌ಮೆಂಟ್ ಸಿಬ್ಬಂದಿ, ಬ್ಯಾಂಕ್ ನೌಕರರು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಜನರನ್ನು ಎಸ್‌ಐಟಿ ಈಗಾಗಲೇ ಸುದೀರ್ಘ ವಿಚಾರಣೆಗೆ ಒಳಪಡಿಸಿದೆ.
ಟ್ರಸ್ಟ್ ಪ್ರಮುಖರ ಮೇಲೆ ತೂಗುಗತ್ತಿ
ಮೂಲಗಳ ಪ್ರಕಾರ, ಈ ಹಗರಣದಲ್ಲಿ ರಾಮಮಂದಿರ ಟ್ರಸ್ಟ್‌ನ ಪ್ರಮುಖ ಪದಾಧಿಕಾರಿಗಳಾದ ಅನಿಲ್ ಮಿಶ್ರಾ ಹಾಗೂ ನಿರ್ಮಾಣ ವಿಭಾಗದ ಸಹಾಯಕ ಗೋಪಾಲ್ ರಾವ್ ಅವರ ಪಾತ್ರದ ಮೇಲೆ ಎಸ್‌ಐಟಿ ತೀವ್ರ ಅನುಮಾನ ವ್ಯಕ್ತಪಡಿಸಿದೆ. ಇದರೊಂದಿಗೆ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರೂ ತನಿಖೆಯ ನಿಗಾ ವಲಯದಲ್ಲಿದ್ದಾರೆ ಎಂದು ಹೇಳಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಗೆ ಸೇರಿದ ಮೂವರು ಪ್ರಮುಖ ಪದಾಧಿಕಾರಿಗಳು ಸೇರಿದಂತೆ ಒಟ್ಟು 20 ರಿಂದ 25 ಜನರು ಈ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಅಥವಾ ಕರ್ತವ್ಯ ಲೋಪ ಎಸಗಿರುವ ಸಾಧ್ಯತೆಯಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಅಯೋಧ್ಯೆ ಬಿಟ್ಟು ಹೋಗದಂತೆ ಕೆಲವು ಟ್ರಸ್ಟ್ ಅಧಿಕಾರಿಗಳಿಗೆ ಎಸ್‌ಐಟಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವ್ಯವಸ್ಥೆಯಲ್ಲಿ ಬದಲಾವಣೆಗೆ ಎಸ್‌ಐಟಿ ಶಿಫಾರಸು
ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಎಸ್‌ಬಿಐ (SBI) ಮತ್ತು ಟಿಸಿಎಸ್ (TCS) ಸಂಸ್ಥೆಯ ತಲಾ ಆರು ನೌಕರರನ್ನು ವಿಚಾರಣೆ ನಡೆಸಲಾಗಿದ್ದು, ತಪ್ಪು ಎಸಗಿರುವ ಟಿನ್ನು ಯಾದವ್ ಸೇರಿದಂತೆ ಕೆಲವು ಬ್ಯಾಂಕ್ ಸಿಬ್ಬಂದಿ ವಿರುದ್ಧ ಶೀಘ್ರದಲ್ಲೇ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ತಡೆಯಲು ಕಾಶಿ ವಿಶ್ವನಾಥ ದೇವಾಲಯದ ಮಾದರಿಯಲ್ಲಿ ರಾಮಮಂದಿರಕ್ಕೂ ಒಬ್ಬ ಕಾರ್ಯನಿರ್ವಾಹಕ ಅಧಿಕಾರಿಯನ್ನು (Executive Officer) ನೇಮಿಸುವುದು, ನಿಯಮಿತ ಆಡಿಟಿಂಗ್ ನಡೆಸುವುದು ಹಾಗೂ ಹುಂಡಿ ಎಣಿಕೆಯಲ್ಲಿ ಸರ್ಕಾರಿ ಅಧಿಕಾರಿಗಳ ಉಸ್ತುವಾರಿಯನ್ನು ಹೆಚ್ಚಿಸುವಂತೆ ಎಸ್‌ಐಟಿ ಶಿಫಾರಸು ಮಾಡಲಿದೆ ಎಂದು ತಿಳಿದುಬಂದಿದೆ.



















