ಬೆಂಗಳೂರು : ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 800 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. 400 ಜೂನಿಯರ್ ಲ್ಯಾಬ್ ಟೆಕ್ನಿಶಿಯನ್ ಹಾಗೂ 400 ಫಾರ್ಮಸಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಕರ್ನಾಟಕ ಆರೋಗ್ಯ ಇಲಾಖೆ
ಒಟ್ಟು ಹುದ್ದೆಗಳು: 800
ನೇಮಕಾತಿ ವಿಧಾನ: ನೇರ ಸಂದರ್ಶನ
ಉದ್ಯೋಗ ಸ್ಥಳ: ರಾಜ್ಯದ ಎಲ್ಲ ಜಿಲ್ಲೆಗಳು
ಬೆಂಗಳೂರು, ಮೈಸೂರು, ಕಲಬುರಗಿ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತಿದೆ. ಆಯಾ ಜಿಲ್ಲೆಗಳಿಗೆ ಸಂಬಂಧಿಸಿದ ಹುದ್ದೆಗಳ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ವಿದ್ಯಾರ್ಹತೆ ಏನು?
ಫಾರ್ಮಸಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಡಿ-ಫಾರ್ಮ್ ಮುಗಿಸಿರಬೇಕು. ಕರ್ನಾಟಕ ಫಾರ್ಮಸಿ ಕೌನ್ಸಿಲ್ ನಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಜೂನಿಯರ್ ಲ್ಯಾಬ್ ಟೆಕ್ನಿಶಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಲ್ಯಾಬೊರೇಟರಿ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಮುಗಿಸಿರಬೇಕು ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಬಯಸುವವರಿಗೆ ಗರಿಷ್ಠ 45 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ನೇಮಕಾತಿ ಹೇಗೆ?
ಸಾರ್ವಜನಿಕರ ಮಾಹಿತಿಗಾಗಿ ಸ್ಥಳೀಯ ಹಾಗೂ ರಾಜ್ಯ ಮಟ್ಟದ ತಲಾ ಒಂದು ಪ್ರಮುಖ ದಿನಪತ್ರಿಕೆಗಳಲ್ಲಿ ಅಧಿಕೃತ ಪ್ರಕಟಣೆ ನೀಡಿ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಪ್ರತಿ ಜಿಲ್ಲೆಯ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಮಾಹಿತಿ ನೀಡಿ ಸಾರ್ವಜನಿಕವಾಗಿ ಪ್ರಚಾರ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಆರೋಗ್ಯ ಇಲಾಖೆಯ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಎಲ್ಲಾ ಕಚೇರಿಗಳ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ. ಅಧಿಕೃತ https://hfwcom.karnataka.gov.in/en ವೆಬ್ ಸೈಟ್ ಗೆ ಕೂಡ ಭೇಟಿ ನೀಡಬಹುದು.
ಇದನ್ನೂ ಓದಿ : ಹರ್ಭಜನ್‌ಗೆ ಬಾಕ್ಸಿಂಗ್ ರಿಂಗ್‌ಗೆ ಬರುವಂತೆ ಶ್ರೀಶಾಂತ್ ಓಪನ್ ಚಾಲೆಂಜ್!


















