ಬೆಂಗಳೂರು : ತೆಲಂಗಾಣದಲ್ಲಿ ನಡೆಯುತ್ತಿರುವ ಟಿಜಿ20 (TG20) ಕ್ರಿಕೆಟ್ ಲೀಗ್ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಭಾರತೀಯ ಕ್ರಿಕೆಟ್‌ನ ಸ್ಟಾರ್ ಆಟಗಾರರಾದ ಮೊಹಮ್ಮದ್ ಸಿರಾಜ್, ತಿಲಕ್ ವರ್ಮಾ ಹಾಗೂ ಅಂಬಾಟಿ ರಾಯುಡು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈದರಾಬಾದ್ ಕ್ರಿಕೆಟ್ ಸಂಸ್ಥೆ (HCA) ಆಯೋಜಿಸುತ್ತಿರುವ ಈ ಲೀಗ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಯಾವುದೇ ಅಧಿಕೃತ ಅನುಮತಿ ಇಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಟಿಜಿ20 ಲೀಗ್‌ನ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಈ ಮೂವರು ಸ್ಟಾರ್ ಕ್ರಿಕೆಟಿಗರು ಹಾಗೂ ಟಾಲಿವುಡ್‌ನ ಖ್ಯಾತ ನಟರಾದ ವಿಜಯ್ ದೇವರಕೊಂಡ ಮತ್ತು ವೆಂಕಟೇಶ್ ಅವರಿಗೆ ತೆಲಂಗಾಣ ಕ್ರಿಕೆಟ್ ಸಂಸ್ಥೆ (TCA) ಕಾನೂನು ನೋಟಿಸ್ ಜಾರಿ ಮಾಡಿದೆ. ಅಧಿಕೃತ ಅನುಮತಿಯಿಲ್ಲದ ಟೂರ್ನಿಯೊಂದನ್ನು ಪ್ರಚಾರ ಮಾಡುತ್ತಿರುವುದು ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಟಿಸಿಎ ಆರೋಪಿಸಿದೆ.
ಎಚ್‌ಸಿಎ ವಿರುದ್ಧ ಗಂಭೀರ ಆರೋಪ
ಬಿಸಿಸಿಐನಿಂದ ಯಾವುದೇ ಲಿಖಿತ ಅನುಮತಿ ಪಡೆಯದೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯು ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ ಮತ್ತು ಅನಧಿಕೃತ ಬ್ಯಾನರ್ ಅಡಿಯಲ್ಲಿ ಟೂರ್ನಿಯನ್ನು ಆಯೋಜಿಸಿ ನಿಧಿ ಸಂಗ್ರಹಿಸುತ್ತಿದೆ ಎಂದು ತೆಲಂಗಾಣ ಕ್ರಿಕೆಟ್ ಸಂಸ್ಥೆ ಆರೋಪಿಸಿದೆ. ಈ ಅಕ್ರಮವನ್ನು ಖಂಡಿಸಿ ಹೈದರಾಬಾದ್‌ನ ಇಂದಿರಾ ಪಾರ್ಕ್ ಬಳಿ ಟಿಸಿಎ ಇತ್ತೀಚೆಗಷ್ಟೇ ಪ್ರತಿಭಟನೆ ಕೂಡ ನಡೆಸಿತ್ತು. ಟಿಸಿಎ ಪ್ರಧಾನ ಕಾರ್ಯದರ್ಶಿ ಗುರುವಾ ರೆಡ್ಡಿ ಅವರು ಎಚ್‌ಸಿಎ ನಿಯಮಾವಳಿಗಳನ್ನು ಉಲ್ಲೇಖಿಸಿ ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ.
ನಿಯಮ 28ರ ಪ್ರಕಾರ ಆಡಳಿತ ಮಂಡಳಿಯನ್ನು ಔಪಚಾರಿಕ ಚುನಾವಣೆಯ ಮೂಲಕ ಮಾತ್ರ ಆಯ್ಕೆ ಮಾಡಬೇಕು ಹಾಗೂ ನಿಯಮ 30ರ ಅನ್ವಯ ಬಿಸಿಸಿಐನಿಂದ ಲಿಖಿತ ಒಪ್ಪಿಗೆ ಪಡೆಯುವುದು ಕಡ್ಡಾಯ. ಆದರೆ, ಇಲ್ಲಿ ರಚನೆಯಾಗಿರುವ ಸ್ವಯಂ-ಘೋಷಿತ ಆಡಳಿತ ಮಂಡಳಿಯು ಬಿಸಿಸಿಐ ಅನುಮತಿ ಇದೆ ಎಂದು ಸುಳ್ಳು ಹೇಳಿ ಸಾರ್ವಜನಿಕರನ್ನು ಹಾಗೂ ಕಾರ್ಪೊರೇಟ್ ಪಾಲುದಾರರನ್ನು ದಾರಿ ತಪ್ಪಿಸುತ್ತಿದೆ ಎಂದು ಅವರು ದೂರಿದ್ದಾರೆ.
ಆಟಗಾರರ ಮೇಲೆ ನಿಷೇಧದ ತೂಗುಗತ್ತಿ
ಅನಧಿಕೃತ ಲೀಗ್‌ಗಳಲ್ಲಿ ಭಾಗವಹಿಸುವುದರಿಂದ ಹಾಗೂ ಪ್ರಚಾರ ಮಾಡುವುದರಿಂದ ಆಗುವ ಪರಿಣಾಮಗಳ ಬಗ್ಗೆಯೂ ಗುರುವಾ ರೆಡ್ಡಿ ಕಟು ಎಚ್ಚರಿಕೆ ನೀಡಿದ್ದಾರೆ. ನಿಯಮ 31ರ ಅನ್ವಯ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಮಾನ್ಯತೆಯನ್ನು ರದ್ದುಗೊಳಿಸುವ ಸಂಪೂರ್ಣ ಸಾಧ್ಯತೆಯಿದೆ ಹಾಗೂ ಈ ಲೀಗ್‌ನಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಮತ್ತು ಸ್ಟಾರ್ ಆಟಗಾರರಾದ ತಿಲಕ್ ವರ್ಮಾ, ಮೊಹಮ್ಮದ್ ಸಿರಾಜ್ ಸೇರಿದಂತೆ ಇತರರ ಮೇಲೆ ನಿಷೇಧ ಹೇರುವ ಅಪಾಯವೂ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಮೊಹಮ್ಮದ್ ಸಿರಾಜ್ ಅವರು ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಅಫಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಹಾಗೂ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಿಂದ ವಿಶ್ರಾಂತಿ ಪಡೆದಿದ್ದಾರೆ. ಮತ್ತೊಂದೆಡೆ, ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಭಾರತ ‘ಎ’ ತಂಡವನ್ನು ಮುನ್ನಡೆಸುತ್ತಿರುವ ಯುವ ಆಟಗಾರ ತಿಲಕ್ ವರ್ಮಾ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಸರಣಿ ಹಾಗೂ 2026ರ ಏಷ್ಯನ್ ಗೇಮ್ಸ್‌ಗೆ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತೀಯ ರಾಷ್ಟ್ರೀಯ ತಂಡದ ಉಪನಾಯಕನಾಗಿಯೂ ತಿಲಕ್ ವರ್ಮಾ ನೇಮಕಗೊಂಡಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊತ್ತಿರುವ ಈ ಸಮಯದಲ್ಲಿ ಎದುರಾಗಿರುವ ಈ ಕಾನೂನು ಸಮರವು ಆಟಗಾರರ ವೃತ್ತಿಜೀವನದ ಮೇಲೆ ಕರಿನೆರಳು ಬೀರುವ ಆತಂಕ ಮೂಡಿಸಿದೆ
ಇದನ್ನೂ ಓದಿ : ಟೆಸ್ಟ್ ಪದಾರ್ಪಣೆಯ ಹೊಸ್ತಿಲಲ್ಲಿ ಜೋರ್ಡಾನ್ ಕಾಕ್ ಜೊತೆ ಕೊಹ್ಲಿ : ಲಂಡನ್‌ನಲ್ಲಿ ವಿಶೇಷ ಭೇಟಿ!



















