ಉಡುಪಿ : ಜಿಲ್ಲೆಯ ಬೈಂದೂರು ತಾಲೂಕಿನ ನಾಡಗುಡ್ಡೆಅಂಗಡಿ ಶ್ರೀ ವನಯಕ್ಷೀ ದೇವಸ್ಥಾನದಲ್ಲಿ ಗುರುವಾರ ಶ್ರೀ ವನಯಕ್ಷೀ ದೇವಿಯ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಶ್ರದ್ಧಾ, ಭಕ್ತಿಭಾವದಿಂದ ವೈಭವಯುತವಾಗಿ ನೆರವೇರಿದೆ. ಬೆಳಿಗ್ಗೆ 9:20ಕ್ಕೆ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.
ವೇ.ಮೂ.ಜಿ. ದೇವದಾಸ್ ಕೃಷ್ಣಾನಂದ ಆಚಾರ್ಯ, ಗಂಗೊಳ್ಳಿ ಅವರ ಮಾರ್ಗದರ್ಶನದಲ್ಲಿ ವೇದಮಂತ್ರಗಳ ಘೋಷದೊಂದಿಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳು, ಪೂಜಾ ಕೈಂಕರ್ಯಗಳು ಹಾಗೂ ಸಂಪ್ರದಾಯಬದ್ಧ ಆಚರಣೆಗಳು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿದ್ದು, ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ದರ್ಶನ, ವಿವಿಧ ಸೇವೆಗಳು ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

ದೇವಸ್ಥಾನದ ಕೋಶಾಧಿಕಾರಿ ಸತೀಶ್ ಎಂ. ನಾಯ್ಕ್ ಮಾತನಾಡಿ, ಶ್ರೀ ವನಯಕ್ಷೀ ದೇವಿಯ ಮಹಿಮೆ ಅಪಾರವಾಗಿದ್ದು, ದೇವಿಯ ಕೃಪೆಯಿಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತಿವೆ ಎಂದು ಹೇಳಿದರು. ಗ್ರಾಮಸ್ಥರು ಹಾಗೂ ಭಕ್ತರ ಅಪಾರ ಸಹಕಾರದಿಂದ ಪ್ರತಿಷ್ಠಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಸಾಧ್ಯವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರತಿ ಶುಕ್ರವಾರ ದೇವಸ್ಥಾನದಲ್ಲಿ ನಡೆಯುವ ಭಜನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಸತೀಶ್ ಭಕ್ತರಲ್ಲಿ ಮನವಿ ಮಾಡಿದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರವೀಂದ್ರ ಜೋಗಿ ಮಾತನಾಡಿ, ಶ್ರೀ ವನಯಕ್ಷೀ ದೇವಿಯ ಸನ್ನಿಧಿಯ ನಿರ್ಮಾಣ ಹಾಗೂ ಪ್ರತಿಷ್ಠಾ ಮಹೋತ್ಸವ ಯಶಸ್ವಿಯಾಗಿ ನೆರವೇರಿರುವುದು ತಮ್ಮ ಜೀವನದ ಸಾರ್ಥಕ ಕ್ಷಣವಾಗಿದೆ. ದೇವಿಯ ಕೃಪೆಯಿಂದ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ತಮ್ಮ ಭಾಗ್ಯ, ಮುಂದಿನ ದಿನಗಳಲ್ಲಿಯೂ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲ ಭಕ್ತರು ಮತ್ತು ಗ್ರಾಮಸ್ಥರು ಕೈಜೋಡಿಸಿ ಸಹಕರಿಸುವಂತೆ ರವೀಂದ್ರ ಜೋಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯದರ್ಶಿ ಶೇಖರ್ ಪೂಜಾರಿ, ಗೌರವಾಧ್ಯಕ್ಷ ಚಂದ್ರಯ್ಯ ಆಚಾರ್ಯ, ದೇವಸ್ಥಾನದ ಸರ್ವ ಸದಸ್ಯರು, ಊರಿನ ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಇದನ್ನೂ ಓದಿ ; 7 ಕೋಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇದೇ ತಿಂಗಳು ಶೇ.8.25ರಷ್ಟು ಬಡ್ಡಿ ಜಮೆ!



















