ಬೆಂಗಳೂರು : ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕೋಟ್ಯಂತರ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಸದಸ್ಯರ ಪಿಎಫ್ ಖಾತೆಗಳಿಗೆ ಇದೇ ಜೂನ್ ತಿಂಗಳೊಳಗೆ ಬಡ್ಡಿ ಜಮೆಯಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗಾಗಿ, ಸುಮಾರು 7 ಕೋಟಿಗೂ ಅಧಿಕ ಇಪಿಎಫ್ಒ ಸದಸ್ಯರಿಗೆ ಇದೇ ತಿಂಗಳೊಳಗೆ ಬಡ್ಡಿ ಜಮೆಯಾಗಲಿದೆ.
2026ರ ಮಾರ್ಚ್ 2 ರಂದು ನವದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಂಡಾವಿಯ ಅವರ ನೇತೃತ್ವದಲ್ಲಿ ಇಪಿಎಫ್ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಸಭೆ ನಡೆಸಿತ್ತು. 2025-26ರ ಹಣಕಾಸು ವರ್ಷದಲ್ಲಿ ಶೇ. 8.25 ರಷ್ಟು ಬಡ್ಡಿ ನೀಡಲು ಸಿಬಿಟಿ ಶಿಫಾರಸು ಮಾಡಿತ್ತು. ಅದರಂತೆ, ಈಗ ಇಪಿಎಫ್ಒ ಸದಸ್ಯರಿಗೆ ಶೇ.8.25ರಷ್ಟು ಬಡ್ಡಿಯನ್ನು ಜಮೆ ಮಾಡಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಡ್ಡಿದರ ಜಮೆಯ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಇಡೀ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ. ಜೂನ್ ತಿಂಗಳ ಅಂತ್ಯದ ವೇಳೆಗೆ ಕಳೆದ ಹಣಕಾಸು ವರ್ಷದ ಬಡ್ಡಿಯ ಹಣವು ವೇತದದಾರರ ಖಾತೆಗಳಿಗೆ ಜಮೆಯಾಗಲಿದೆ. ಬಡ್ಡಿ ಜಮೆಯಾದ ಕೂಡಲೇ ಮೊತ್ತವು ಇಪಿಎಫ್ಒ ಸದಸ್ಯರ ಖಾತೆಗಳಲ್ಲಿ ಗೋಚರವಾಗಲಿದೆ ಎಂದು ಕೂಡ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಪಿಎಫ್ಒ ಸಂಬಳ ಪಡೆಯುವ ಉದ್ಯೋಗಿಗಳಿಗೆ ವಾರ್ಷಿಕವಾಗಿ ಬಡ್ಡಿ ಜಮೆ ಮಾಡುತ್ತದೆ. ಇಪಿಎಫ್ಒ ಪ್ರತಿ ತಿಂಗಳು ಈ ಬಡ್ಡಿಯನ್ನು ಲೆಕ್ಕ ಹಾಕುತ್ತದೆಯಾದರೂ, ಅದನ್ನು ಪ್ರತಿ ತಿಂಗಳು ಖಾತೆಗೆ ಜಮೆ ಮಾಡುವುದಿಲ್ಲ. ಬದಲಿಗೆ, ಪ್ರತಿ ವರ್ಷ ಮಾರ್ಚ್ 31ರಂದು ಕೊನೆಗೊಳ್ಳುವ ಹಣಕಾಸು ವರ್ಷದ ಒಟ್ಟು ಬಡ್ಡಿಯನ್ನು ಒಮ್ಮೆಯೇ ಜಮೆ ಮಾಡುತ್ತದೆ. ಕಳೆದ ವರ್ಷವೂ ಇಪಿಎಫ್ಒ ಉದ್ಯೋಗಿಗಳಿಗೆ ಶೇ.8.25ರಷ್ಟು ಬಡ್ಡಿ ಜಮೆ ಮಾಡಿತ್ತು.
ಇದನ್ನೂ ಓದಿ : ಕೇಂದ್ರ ಸರ್ಕಾರದ RVNL ಸಂಸ್ಥೆಯಲ್ಲಿ 6 ಹುದ್ದೆಗಳು ಖಾಲಿ – ಕರ್ನಾಟಕದ 2 ಜಿಲ್ಲೆಯಲ್ಲಿ ನೇಮಕಾತಿ!



















