ಬೆಂಗಳೂರು : ನಗರದ ನಿಮ್ಹಾನ್ಸ್ ಲೇಔಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸ್ನೇಹಿತರಾಗಿದ್ದ ಇಬ್ಬರು ಯುವಕರ ನಡುವಿನ ವಾಗ್ವಾದ ತೀವ್ರಗೊಂಡು, ಓರ್ವ ಯುವಕನ ಸಾವಿಗೆ ಕಾರಣವಾಗಿದೆ.
ಘಟನೆಯಲ್ಲಿ ವಸೀಂ ಎಂಬ ಯುವಕ ಮೃತಪಟ್ಟಿದ್ದು, ಸೈಯದ್ ಸಮೀರ್ ಎಂಬಾತ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ನಿನ್ನೆ ಅವರ ನಡುವೆ ಜಗಳ ನಡೆದಿದೆ.
ಮಾಹಿತಿಯ ಪ್ರಕಾರ, ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದದ ವೇಳೆ ವಸೀಂ, ಸಮೀರ್‌ನ ತಂದೆ ಮತ್ತು ಅಕ್ಕನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಇಬ್ಬರ ನಡುವಿನ ಮಾತಿನ ಚಕಮಕಿ ತೀವ್ರಗೊಂಡಿದೆ.
ಕೋಪಗೊಂಡ ಸೈಯದ್ ಸಮೀರ್, ಚಾಕುವಿನಿಂದ ವಸೀಂ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡ ವಸೀಂನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಸೀಂ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.
ಜಗಳದ ವೇಳೆ ಸೈಯದ್ ಸಮೀರ್ ಕೂಡ ಗಾಯಗೊಂಡಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕಾಂಪೌಂಡ್ ಗೋಡೆ ಕುಸಿದು 5 ವರ್ಷದ ಮಗು ಸಾವು.. ಮತ್ತೋರ್ವ ಬಾಲಕಿಗೆ ಗಾಯ!


















