ಮೈಸೂರು : ಮೈಸೂರಿನ ವಿಜಯನಗರದಲ್ಲಿರುವ ಹೋಟೆಲ್ ಒಂದರಲ್ಲಿ ಭಾರೀ ಕಿರಿಕ್ ನಡೆದಿದ್ದು, ನಾನ್‌ವೆಜ್ ಪಾರ್ಸಲ್‌ನಲ್ಲಿ ಚಿಕನ್ ತಂದೂರಿ ಜೊತೆ ಮೇಯೋನಿಸ್ ನೀಡಿಲ್ಲ ಎಂಬ ಕಾರಣಕ್ಕೆ ಹೋಟೆಲ್ ಸಿಬ್ಬಂದಿಗೆ ಮತ್ತೊಂದು ಹೊಟೇಲ್‌ನ ಮಾಲೀಕ ದಮ್ಕಿ ಹಾಕಿ ಅಟ್ಟಹಾಸ ಮರೆದಿರುವ ಘಟನೆ ನಡೆದಿದೆ.
ವಿಜಯನಗರದ ಚಾಮುಂಡೇಶ್ವರಿ ದೊನ್ನೆ ಬಿರಿಯಾನಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ದಂ ಬಿರಿಯಾನಿ ಹೋಟೆಲ್ ಮಾಲೀಕ ಶ್ರೀನಿವಾಸ್ ವಿರುದ್ಧ ದರ್ಪ ತೋರಿದ ಆರೋಪ ಕೇಳಿಬಂದಿದೆ. ಚಿಕನ್ ತಂದೂರಿ ಪಾರ್ಸಲ್ ತೆಗೆದುಕೊಂಡು ಹೋಗಿದ್ದ ಶ್ರೀನಿವಾಸ್, ಅದರಲ್ಲಿ ಮೇಯೋನಿಸ್ ಇಲ್ಲವೆಂದು ಮತ್ತೆ ಹೋಟೆಲ್‌ಗೆ ವಾಪಸ್ ಬಂದಿದ್ದಾರೆ.
ಹೋಟೆಲ್‌ಗೆ ಬಂದ ಬಳಿಕ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಶ್ರೀನಿವಾಸ್, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು ಮಾತ್ರವಲ್ಲದೆ, ಪ್ರಾಣ ಬೆದರಿಕೆಯನ್ನೂ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕ್ಷುಲ್ಲಕ ವಿಚಾರವೊಂದನ್ನು ದೊಡ್ಡ ವಿವಾದವನ್ನಾಗಿ ಮಾಡಿ ಸಿಬ್ಬಂದಿಯನ್ನು ಬೆದರಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಘಟನೆಯ ವೇಳೆ ಹೋಟೆಲ್ ಒಳಗೆ ನುಗ್ಗಿ ಸಿಬ್ಬಂದಿಗಳೊಂದಿದಗೆ ಆಕ್ರೋಶದಿಂದ ವರ್ತಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿವೆ. ಈ ಘಟನೆ ಸ್ಥಳೀಯ ವ್ಯಾಪಾರಿಗಳ ವಲಯದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈ ಸಂಬಂಧ ಚಾಮುಂಡೇಶ್ವರಿ ದೊನ್ನೆ ಬಿರಿಯಾನಿ ಹೋಟೆಲ್ ಮಾಲೀಕ ಚೇತನ್ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಂ ಬಿರಿಯಾನಿ ಹೋಟೆಲ್ ಮಾಲೀಕ ಶ್ರೀನಿವಾಸ್ ವಿರುದ್ಧ ಪ್ರಾಣ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪದಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಪ್ರಕರಣದ ಕುರಿತು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : ‘ಕರ್ನಾಟಕ ಛಾಯಾರತ್ನ’ ಪ್ರಶಸ್ತಿಗೆ ಭಾಜನರಾದ ಹಿರಿಯ ಛಾಯಾಗ್ರಾಹಕ ಹೆಚ್.ಬಿ. ಹನುಮೇಗೌಡ!


















