ಉಡುಪಿ : ಅಂತರ್‌ರಾಜ್ಯ ಮಟ್ಟದಲ್ಲಿ ಮನೆ ಕಳ್ಳತನ ನಡೆಸುತ್ತಿದ್ದ ‘TATTO 313’ ಹೆಸರಿನ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು ₹7.90 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಅಮಿತ್ ಡ್ಯಾನಿಯಲ್ ಅವರ ಮನೆಯಲ್ಲಿ ಫೆಬ್ರವರಿ 3 ಮತ್ತು 4ರ ನಡುವೆ ನಡೆದ ಕಳ್ಳತನ ಪ್ರಕರಣದ ತನಿಖೆ ವೇಳೆ ಈ ಯಶಸ್ಸು ದೊರೆತಿದೆ. ಮನೆಗೆ ಬೀಗ ಹಾಕಿ ತೆರಳಿದ್ದ ವೇಳೆ ಕಳ್ಳರು ಮನೆಯೊಳಗೆ ನುಗ್ಗಿ ಸುಮಾರು 75 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗಸ್ತು ತಿರುಗುತ್ತಿದ್ದ ಪೊಲೀಸರು, ಸಿಕ್ಕಿಬಿದ್ದ ಖತರ್ನಾಕ್ ಕಳ್ಳರು
ಜೂನ್ 6ರಂದು ರಾತ್ರಿ ಪಹರೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಗೋಡೌನ್ ರಸ್ತೆಯ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದದ್ದನ್ನು ಗಮನಿಸಿದ್ದಾರೆ. ಕೂಡಲೇ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರನ್ನು ಬೆಂಗಳೂರು ಮೂಲದ ದರ್ಶನ್ ಆರ್. (21) ಹಾಗೂ ದಾವಣಗೆರೆ ಜಿಲ್ಲೆಯ ಚಂದ್ರು (26) ಎಂದು ಗುರುತಿಸಲಾಗಿದೆ.
ಬಳಿಕ ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಿದಾಗ, ಕಳವು ಮಾಡಿದ ಚಿನ್ನಾಭರಣವನ್ನು ಶಿವಮೊಗ್ಗದ ಲಾಡ್ಜ್ ಒಂದರಲ್ಲಿ ಅಡಗಿಸಿಟ್ಟಿರುವ ಮಾಹಿತಿ ಲಭ್ಯವಾಗಿದೆ. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು 70 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಕರಿಮಣಿ ಸರ, ನೆಕ್ಲೆಸ್, ಕಿವಿಯೋಲೆ ಹಾಗೂ ಚಿನ್ನದ ಸರ ಸೇರಿದ್ದು, ಒಟ್ಟು ಮೌಲ್ಯ ಸುಮಾರು ₹7.90 ಲಕ್ಷ ಎಂದು ಅಂದಾಜಿಸಲಾಗಿದೆ.
ಅಂತರ್‌ರಾಜ್ಯ TATTO 313 ಕಳ್ಳತನ ಗ್ಯಾಂಗ್‌ನ ತಂಡದ ಸದಸ್ಯರು
ಪೊಲೀಸರ ಪ್ರಕಾರ, ಆರೋಪಿಗಳು ತಮ್ಮ ಕೈಗಳ ಮೇಲೆ ‘TATTO 313’ ಎಂಬ ಹಚ್ಚೆ ಹಾಕಿಸಿಕೊಂಡು ಅದೇ ಹೆಸರಿನ ಗ್ಯಾಂಗ್‌ನ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ರೈಲ್ವೆ ನಿಲ್ದಾಣಗಳ ಸಮೀಪದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುವುದು ಇವರ ಕಾರ್ಯವೈಖರಿಯಾಗಿತ್ತು. ರಾತ್ರಿ ವೇಳೆ ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಹಾಗೂ ಕಾಲಿಗೆ ಸಾಕ್ಸ್ ಧರಿಸಿ, ಕಬ್ಬಿಣದ ಉಪಕರಣಗಳ ನೆರವಿನಿಂದ ಮನೆಗಳ ಬಾಗಿಲು ಒಡೆದು ಕಳ್ಳತನ ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಕಳ್ಳತನ ಪ್ರಕರಣದಲ್ಲೂ ಇವರ ಪಾತ್ರ ಇರುವ ಸಾಧ್ಯತೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳ ಬಂಧನ ಬಾಕಿಯಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಹಣಕಾಸಿನ ವಿಚಾರಕ್ಕೆ 2 ಗುಂಪುಗಳ ನಡುವೆ ಭೀಕರ ಮಾರಾಮಾರಿ ; 16 ವರ್ಷದ ಬಾಲಕ ಗಂಭೀರ!



















