ಮೈಸೂರು : ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರ ನಿರ್ಲಕ್ಷ್ಯ ಹಾಗೂ ಹುಚ್ಚಾಟದಿಂದ ಅವಘಡ ಸಂಭವಿಸಿದೆ. ನಿಯಮಗಳನ್ನು ಉಲ್ಲಂಘಿಸಿ ಹಿನ್ನೀರಿನೊಳಗೆ ಕಾರು ತೆಗೆದುಕೊಂಡು ಹೋಗಿದ್ದ ಯುವಕರು, ಅಲ್ಲಿಯೇ ವಾಹನ ನಿಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ವೇಳೆ ಕಾರು ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿದೆ.
ಮಾಹಿತಿಯ ಪ್ರಕಾರ, ಕೆಲ ಯುವಕರು ಕಬಿನಿ ಹಿನ್ನೀರಿನ ಅಪಾಯಕಾರಿ ಪ್ರದೇಶಕ್ಕೆ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಬಳಿಕ ಹಿನ್ನೀರಿನ ಮಧ್ಯಭಾಗದಲ್ಲಿ ಕಾರು ನಿಲ್ಲಿಸಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ಕಾರು ನೀರಿನೊಳಗೆ ಜಾರಿದ್ದು, ಕೆಲವೇ ಕ್ಷಣಗಳಲ್ಲಿ ಸಂಪೂರ್ಣವಾಗಿ ಮುಳುಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಯುವಕರು ಸಮಯಕ್ಕೆ ಸರಿಯಾಗಿ ಹೊರಬಂದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಪ್ರವಾಸಿಗರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರಕ್ಷತಾ ನಿಯಮಗಳನ್ನು ಪಾಲಿಸದೇ ಸಾಹಸ ಪ್ರದರ್ಶಿಸಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳುವ ಇಂತಹ ಘಟನೆಗಳು ಮರುಕಳಿಸುತ್ತಿರುವುದಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ; ಉದ್ಯಮಿಗೆ ಕಾಂಗ್ರೆಸ್ ಮುಖಂಡನಿಂದ ಹನಿಟ್ರ್ಯಾಪ್ – ಕೋಟಿ ಕೋಟಿ ವಸೂಲಿ ಮಾಡಿದ್ದ ನಿಝಾಮ್ ಸಿಕ್ಕಿಬಿದ್ದಿದ್ದೇ ರೋಚಕ!



















