ಸ್ಯಾಂಟೋ ಡೊಮಿಂಗೊ : ಭಾನುವಾರ (ಜೂ.7) ಸಂಜೆ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಟೇಕ್ ಆಫ್ ಕೆಲವೇ ಕ್ಷಣಗಳಲ್ಲಿ ಖಾಸಗಿ ಜೆಟ್‌ವೊಂದು ಪತನಗೊಂಡಿದೆ. ಪರಿಣಾಮ ಇಬ್ಬರು ಪೈಲಟ್ ಸಾವನ್ನಪ್ಪಿದ್ದು, ವಿಮಾನ ಹೊತ್ತಿಯುರಿದಿರುವ ಬೆಚ್ಚಿಬೀಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಪಘಾತದಲ್ಲಿ ಪೈಲಟ್‌ಗಳಾದ ಎರಿಕ್ ಜೇವಿಯರ್ ಡಿಯಾಗೋ ಮತ್ತು ರೂಡಿ ಗಜಲ್ ಸಾವನ್ನಪ್ಪಿದ್ದಾರೆ. ಪೈಲಟ್ ಹೊರತಾಗಿ ವಿಮಾನದಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ ಎಂದು ತಿಳಿದುಬಂದಿದೆ.
ಅಮೆರಿಕದಲ್ಲಿ ನೋಂದಣಿಯಾಗಿರುವ `ಐಬೊನಿಟೊ ಏವಿಯೇಷನ್’ ಸಂಸ್ಥೆಗೆ ಸೇರಿದ ಖಾಸಗಿ ಜೆಟ್ Gulfstream G200 ಲಾ ರೊಮಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೆಕ್ಸಾಸ್‌ನ ಆಸ್ಟಿನ್‌ಗೆ ಹೊರಟಿತ್ತು. ಈ ವೇಳೆ ಜೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ಪೈಲಟ್ ವಿಮಾನವನ್ನು ಹಿಂದಿರುಗಿಸಿದ್ದು, ಟೇಕ್ ಆಫ್ ಆದ ವಿಮಾನ ನಿಲ್ದಾಣದಲ್ಲೇ ತುರ್ತು ಲ್ಯಾಂಡ್ ಆಗಲು ನಿರ್ಧರಿಸಿದ್ದಾರೆ. ಅದರಂತೆ ರನ್‌ವೇ 29ರಲ್ಲಿ ಲ್ಯಾಂಡ್ ಆಗುತ್ತಿದ್ದಾಗ ವಿಮಾನ ನಿಯಂತ್ರಣ ಕಳೆದುಕೊಂಡಿದ್ದು, ಪಕ್ಕದ ಹುಲ್ಲುಗಾವಲು ಪ್ರದೇಶಕ್ಕೆ ನುಗ್ಗಿ, ಕ್ಷಣಾರ್ಧದಲ್ಲಿ ಹೊತ್ತಿಉರಿದಿದೆ.
ವಿಮಾನ ನಿಲ್ದಾಣದ ರಕ್ಷಣಾ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಕಾರ್ಯನಿರತರಾದರೂ ಕೂಡ ಪೈಲಟ್‌ಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ವಿಮಾನ ಅಪಘಾತಕ್ಕೀಡಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಮಾನ ನಿಲ್ದಾಣದ ಮೇಲೆ ದಟ್ಟವಾದ ಕಪ್ಪು ಹೊಗೆ ಆವರಿಸಿರುವ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಘಟನೆಯ ಬೆನ್ನಲ್ಲೇ ಡೊಮಿನಿಕನ್ ವಾಯುಯಾನ ಅಧಿಕಾರಿಗಳು ಅಪಘಾತಕ್ಕೆ ನಿಖರ ಕಾರಣ ತಿಳಿಯಲು ತನಿಖೆಗೆ ಆದೇಶಿಸಿದ್ದಾರೆ. ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿರುವ ಲಾ ರೊಮಾನಾ ವಿಮಾನ ನಿಲ್ದಾಣದಲ್ಲಿ 2021ರಲ್ಲೂ ಇಂತಹದ್ದೇ ಒಂದು ಖಾಸಗಿ ವಿಮಾನ ಅಪಘಾತ ಸಂಭವಿಸಿತ್ತು.
ಇದನ್ನೂ ಓದಿ : ಸರ್ಕಾರಿ ಉದ್ಯೋಗ ಕೊಡಿಸುವ ನೆಪವೊಡ್ಡಿ 5.30 ಕೋಟಿ ರೂ. ವಂಚನೆ ; ಅಪ್ಪ-ಮಗಳು ಬಂಧನ



















