ಚೆನ್ನೈ/ನವದೆಹಲಿ: ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರ ರಾಜೀನಾಮೆಯನ್ನು ಕೊನೆಗೂ ಬಿಜೆಪಿ ಹೈಕಮಾಂಡ್ ಅಂಗೀಕರಿಸಿದ್ದು, ಈ ಮೂಲಕ ತಮಿಳುನಾಡು ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಹಲವು ದಿನಗಳ ಸಸ್ಪೆನ್ಸ್‌ಗೆ ತೆರೆ ಬಿದ್ದಿದೆ. ರಾಜ್ಯ ಬಿಜೆಪಿಯ ಅತ್ಯಂತ ಪ್ರಭಾವಿ ಹಾಗೂ ಜನಪ್ರಿಯ ನಾಯಕರಾಗಿದ್ದ ಅಣ್ಣಾಮಲೈ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅಧಿಕೃತವಾಗಿ ಅಂಗೀಕರಿಸಿದ್ದಾರೆ ಎಂದು ಪಕ್ಷವೇ ತಿಳಿಸಿದೆ. ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರೊಂದಿಗೆ ಅಣ್ಣಾಮಲೈ ಅವರು ಸಂವಾದ ನಡೆಸಲಿದ್ದಾರೆ.
ಸೌಹಾರ್ದಯುತ ವಿದಾಯಕ್ಕೆ ನಡೆದಿತ್ತು ಕಸರತ್ತು
ಕಳೆದ ಕೆಲವು ದಿನಗಳಿಂದಲೇ ಅಣ್ಣಾಮಲೈ ಅವರ ಮುಂದಿನ ರಾಜಕೀಯ ಹೆಜ್ಜೆಯ ಕುರಿತು ವದಂತಿಗಳು ಹರಿದಾಡುತ್ತಿದ್ದವು. ಪಕ್ಷದೊಂದಿಗಿನ ಸಂಬಂಧವನ್ನು ಸೌಹಾರ್ದಯುತವಾಗಿ ಕೊನೆಗೊಳಿಸಲು ಬಯಸಿದ್ದ 41 ವರ್ಷದ ಯುವ ನಾಯಕ, ಮಂಗಳವಾರವೇ ನವದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿದ್ದರು. ತದನಂತರ ಕೇಂದ್ರ ಸಚಿವ ಅಮಿತ್ ಶಾ ಹಾಗೂ ತಮ್ಮನ್ನು ರಾಜಕಾರಣಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ.ಎಲ್. ಸಂತೋಷ್ ಅವರೊಂದಿಗೂ ಮಾತುಕತೆ ನಡೆಸಿದ್ದರು. ಆದರೆ, ತಕ್ಷಣವೇ ನಿರ್ಧಾರ ಕೈಗೊಳ್ಳದಂತೆ ವರಿಷ್ಠರು ಸೂಚಿಸಿದ್ದರು. ಇದರ ಬೆನ್ನಲ್ಲೇ ತಮಿಳುನಾಡಿನ ಹಾಲಿ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರನ್ನೂ ದೆಹಲಿಗೆ ಕರೆಸಿಕೊಂಡು ಗುರುವಾರ ಮತ್ತೊಂದು ಸುತ್ತಿನ ಸಂಧಾನ ನಡೆಸಲಾಯಿತಾದರೂ, ಅಂತಿಮವಾಗಿ ಅಣ್ಣಾಮಲೈ ಅವರ ನಿರ್ಧಾರಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸಿದೆ.
“ರಾಷ್ಟ್ರೀಯ ಪಕ್ಷಗಳಿಗೆ ಜನರ ಭಾಷೆ ಅರ್ಥವಾಗುತ್ತಿಲ್ಲ”
ತಮ್ಮ ರಾಜೀನಾಮೆ ಪತ್ರದಲ್ಲಿ ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಕುರಿತು ಅಣ್ಣಾಮಲೈ ಮುಕ್ತವಾಗಿ ಅಸಮಾಧಾನ ಹಂಚಿಕೊಂಡಿದ್ದಾರೆ. “ರಾಷ್ಟ್ರೀಯ ಪಕ್ಷಗಳು ಎಂದಿಗೂ ತಮಿಳುನಾಡು ಜನತೆಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡುತ್ತಿಲ್ಲ. ನಾನು ಈ ಮನಸ್ಥಿತಿಯನ್ನು ಬದಲಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಪಕ್ಷದ ಒಳಗಿನಿಂದ ಮತ್ತು ಹೊರಗಿನಿಂದ ಹಲವಾರು ಅಡೆತಡೆಗಳು, ಸವಾಲುಗಳು ಎದುರಾದರೂ ಒಂದು ಮಟ್ಟದ ಯಶಸ್ಸನ್ನು ಸಾಧಿಸಿದೆ” ಎಂದು ಅವರು ಉಲ್ಲೇಖಿಸಿದ್ದಾರೆ. ಇದೇ ವೇಳೆ ತಮಗೆ ಇಷ್ಟು ದಿನ ಬೆಂಬಲವಾಗಿ ನಿಂತ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಭಿನ್ನಾಭಿಪ್ರಾಯ ಮೂಡಿಸಿತೇ ಎಐಎಡಿಎಂಕೆ ಮೈತ್ರಿ?
ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೆ ಆಕರ್ಷಿತರಾಗಿ 2020ರಲ್ಲಿ ನಾಗರಿಕ ಸೇವೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಸೇರಿದ ಕೆಲವೇ ವಾರಗಳಲ್ಲಿ ರಾಜ್ಯ ಉಪಾಧ್ಯಕ್ಷರಾಗಿ, ನಂತರ 37ನೇ ವಯಸ್ಸಿಗೆ ತಮಿಳುನಾಡು ಅಧ್ಯಕ್ಷರಾಗಿ ನೇಮಕಗೊಂಡು ದಾಖಲೆ ಬರೆದಿದ್ದರು. ತಮಿಳುನಾಡಿನಲ್ಲಿ ಪಕ್ಷದ ಮತ ಬ್ಯಾಂಕ್ ಹಾಗೂ ಜನಪ್ರಿಯತೆಯನ್ನು ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಐಎಡಿಎಂಕೆ (AIADMK) ಜೊತೆ ಬಿಜೆಪಿ ವರಿಷ್ಠರು ಮೈತ್ರಿ ಪುನರಾರಂಭಿಸಿದ ಬೆನ್ನಲ್ಲೇ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದವು ಎನ್ನಲಾಗಿದೆ. ತಮಿಳುನಾಡಿನಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಿ ನೆಲೆ ಗಟ್ಟಿಗೊಳಿಸಬೇಕು ಎಂಬುದು ಅಣ್ಣಾಮಲೈ ವಾದವಾಗಿತ್ತು. ಆದರೆ ಮೈತ್ರಿಗೆ ಅಣ್ಣಾಮಲೈ ಅವರ ತೀವ್ರ ವಿರೋಧವಿದ್ದ ಕಾರಣ, ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಅವರ ಒತ್ತಾಯದ ಮೇರೆಗೆ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಲಾಗಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ರಾಜಕೀಯ ಪಕ್ಷದತ್ತ ಅಣ್ಣಾಮಲೈ ಚಿತ್ತ?
ಅಣ್ಣಾಮಲೈ ಅವರ ಮುಂದಿನ ನಡೆ ಏನು ಎಂಬ ಕುರಿತು ಅವರ ಆಪ್ತ ವಲಯದಿಂದ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ತಮಿಳುನಾಡಿನಾದ್ಯಂತ ಯುವ ನಾಯಕರನ್ನು ಗುರುತಿಸಿ, ಅವರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಬೃಹತ್ ಜನತಾ ಚಳವಳಿಯೊಂದನ್ನು ರೂಪಿಸಲು ಅವರು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಅವರು ನಡೆಸುತ್ತಿರುವ “ವಿ ದ ಲೀಡರ್ಸ್” (We The Leaders) ಎಂಬ ಲಾಭರಹಿತ ನಾಯಕತ್ವ ಉಪಕ್ರಮವೇ ಈ ಹೊಸ ರಾಜಕೀಯ ಯೋಜನೆಗೆ ಭದ್ರ ಬುನಾದಿಯಾಗಲಿದ್ದು, ಮುಂದಿನ ದಿನಗಳಲ್ಲಿ ಇದು ಹೊಸ ರಾಜಕೀಯ ಪಕ್ಷವಾಗಿ ರೂಪಾಂತರಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.


















