ಬೆಂಗಳೂರು: ಜಾಗತಿಕ ಭೌಗೋಳಿಕ ರಾಜಕೀಯ ಸಂಘರ್ಷ, ಚಿನ್ನ ಹಾಗೂ ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದ್ದರೂ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಇಂದು (ಜೂನ್ 5) 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 38 ರೂಪಾಯಿ ಇಳಿಕೆಯಾಗಿದೆ. ಇದೇ ರೀತಿ, 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 35 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಚಿನ್ನ ಖರೀದಿಸುವವರಿಗೆ ಶುಕ್ರವಾರವು ಶುಭ ಶುಕ್ರವಾರ ಎನಿಸಿದೆ.
ಇದರೊಂದಿಗೆ ಬೆಂಗಳೂರಿನಲ್ಲಿ 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯು 15,573 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ, 22 ಕ್ಯಾರೆಟ್ ನ ಒಂದು ಗ್ರಾಂ ಬಂಗಾರದ ಧಾರಣೆಯು 14,275 ರೂಪಾಯಿ ಆಗಿದೆ. ಕಳೆದ 7 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 4 ಬಾರಿ ಇಳಿಕೆಯಾದರೆ, ಮೂರು ಬಾರಿ ಯಥಾಸ್ಥಿತಿ ಮುಂದುವರಿದಿದೆ. ಕಳೆದ ಒಂದು ವಾರದಿಂದ ಚಿನ್ನದ ದರದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ.
ಬೆಳ್ಳಿ ದರದಲ್ಲೂ ಇಳಿಕೆ
ಬೆಳ್ಳಿಯ ಧಾರಣೆಯಲ್ಲೂ ಶುಕ್ರವಾರ ಇಳಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿ ದರದಲ್ಲಿ ಇಂದು 5 ಸಾವಿರ ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಒಂದು ಕೆ.ಜಿ ಬೆಳ್ಳಿಯ ಬೆಲೆಯು 2.75 ಲಕ್ಷ ರೂಪಾಯಿಗೆ ಇಳಿಕೆಯಾದಂತಾಗಿದೆ. ಕಳೆದ ಆರು ದಿನಗಳಿಂದಲೂ ಬೆಳ್ಳಿಯ ಧಾರಣೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. 6 ದಿನಗಳಿಂದಲೂ ಬೆಲೆಯು ಕೆ.ಜಿ.ಗೆ 2.8 ಲಕ್ಷ ರೂಪಾಯಿ ಇತ್ತು.
ಜಾಗತಿಕ ಸಂಘರ್ಷದ ಹಿನ್ನೆಲೆಯಲ್ಲಿ ಒಂದು ವರ್ಷದವರೆಗೆ ಚಿನ್ನವನ್ನು ಖರೀದಿಸದಿರಿ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಕಾರಣ ದೇಶಾದ್ಯಂತ ಜನ ಬಂಗಾರದ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಚಿನ್ನಕ್ಕೆ ಬೇಡಿಕೆ ಕುಸಿದಿದೆ. ಹಾಗಾಗಿಯೇ, ಬಂಗಾರದ ಬೆಲೆಯು ಸತತವಾಗಿ ಇಳಿಕೆಯಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.


















