ತುಮಕೂರು : ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾರೀ ಎಡವಟ್ಟಾಗಿದ್ದು, ಚಿನ್ನದ ಪದಕ ಪಡೆಯಬೇಕಿದ್ದ ವಿದ್ಯಾರ್ಥಿಗಳಿಗೆ ನಿರಾಸೆ ಎದುರಾಗಿದೆ. ಚಿನ್ನದ ಪದಕಗಳನ್ನು ವಿತರಿಸಬೇಕಿದ್ದ ಗುತ್ತಿಗೆದಾರ ಕೊನೆಯ ಕ್ಷಣದಲ್ಲಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿರುವುದರಿಂದ, ವಿಶ್ವವಿದ್ಯಾಲಯವು ಪದಕಗಳ ಬದಲು ಚೆಕ್ ಮುಖಾಂತರ ಹಣ ವಿತರಿಸಿದೆ.
ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಈ ಬೆಳವಣಿಗೆಯಿಂದ ಅಸಮಾಧಾನ ವ್ಯಕ್ತಪಡಿಸಿದ್ದು, “ನಮಗೆ ಹಣ ಬೇಡ, ಚಿನ್ನದ ಪದಕವೇ ಬೇಕು” ಎಂದು ವೇದಿಕೆ ಮೇಲೆಯೇ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಲವು ವರ್ಷಗಳ ಪರಿಶ್ರಮಕ್ಕೆ ಸಿಗುವ ಗೌರವದ ಸಂಕೇತವಾದ ಪದಕದ ಬದಲು ಹಣ ನೀಡಿರುವ ಕ್ರಮ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಸುಮಾರು 7 ಲಕ್ಷ 90 ಸಾವಿರ ರೂಪಾಯಿ ವೆಚ್ಚದಲ್ಲಿ 119 ಚಿನ್ನದ ಲೇಪನ ಹೊಂದಿರುವ ಬೆಳ್ಳಿ ಪದಕಗಳನ್ನು ತಯಾರಿಸಲು ಮಧ್ಯಪ್ರದೇಶ ಮೂಲದ ವ್ಯಕ್ತಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಘಟಿಕೋತ್ಸವದ ಮುನ್ನವೇ ಗುತ್ತಿಗೆದಾರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದು, ಪದಕಗಳು ವಿಶ್ವವಿದ್ಯಾಲಯಕ್ಕೆ ತಲುಪಿಲ್ಲ ಎನ್ನಲಾಗಿದೆ.
ಗುತ್ತಿಗೆದಾರನ ಈ ಎಡವಟ್ಟಿನಿಂದ ಚಿನ್ನದ ಪದಕ ಪಡೆಯಬೇಕಿದ್ದ ವಿದ್ಯಾರ್ಥಿಗಳು ನಿರಾಸೆ ಅನುಭವಿಸಿದ್ದು, ವಿಶ್ವವಿದ್ಯಾಲಯದ ಆಡಳಿತ ಕ್ರಮದ ವಿರುದ್ಧವೂ ಪ್ರಶ್ನೆಗಳು ಕೇಳಿಬರುತ್ತಿವೆ. ಘಟನೆ ಇದೀಗ ಶಿಕ್ಷಣ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವಿದ್ಯಾರ್ಥಿಗಳು ಶೀಘ್ರದಲ್ಲೇ ಮೂಲ ಚಿನ್ನದ ಪದಕಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ವಿದ್ಯುತ್ ತಂತಿ ತಗುಲಿ 8 ವರ್ಷದ ಬಾಲಕ ದಾರುಣ ಸಾವು!


















