ಲಾಹೋರ್ : ಮಕ್ಕಳ ಕಣ್ಣೆದುರೇ ಫ್ರೆಂಚ್ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ದೇಶವ್ಯಾಪಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಇಬ್ಬರು ಅಪರಾಧಿಗಳ ಮರಣದಂಡನೆ ಶಿಕ್ಷೆಯನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ. ಕೆಳ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಲಾಹೋರ್ ಹೈಕೋರ್ಟ್ ಇಂದು ವಜಾಗೊಳಿಸಿದ್ದು, ಈ ಹೀನ ಕೃತ್ಯ ಎಸಗಿದ ರಾಕ್ಷಸರಿಗೆ ಗಲ್ಲು ಶಿಕ್ಷೆ ಕಾಯಂ ಎಂದು ಆದೇಶಿಸಿದೆ.
ಈ ದಾರುಣ ಘಟನೆ ನಡೆದಿದ್ದು 2020ರ ಸೆಪ್ಟೆಂಬರ್ 9 ರಂದು. ಪಾಕಿಸ್ತಾನ ಮೂಲದ ಫ್ರೆಂಚ್ ಮಹಿಳೆಯೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಸಿಯಾಲ್‌ಕೋಟ್-ಲಾಹೋರ್ ಮಾರ್ಗದಲ್ಲಿ ತಡರಾತ್ರಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಅವರ ಕಾರಿನ ಪೆಟ್ರೋಲ್ ಖಾಲಿಯಾದ ಕಾರಣ ಹೆದ್ದಾರಿ ಪಕ್ಕದಲ್ಲೇ ಕಾರು ನಿಲ್ಲಿಸಿ ಸಹಾಯಕ್ಕಾಗಿ ಕಾಯುತ್ತಿದ್ದರು. ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯು ಮಕ್ಕಳೊಂದಿಗೆ ಕಾರಿನ ಒಳಗಡೆಯೇ ಬಾಗಿಲು ಲಾಕ್ ಮಾಡಿಕೊಂಡು ಕುಳಿತಿದ್ದರು. ಆದರೆ ಅಲ್ಲಿಗೆ ಬಂದ ಆಬಿದ್ ಅಲಿ ಮತ್ತು ಶಫ್ಕತ್ ಅಲಿ ಎಂಬ ಇಬ್ಬರು ದುಷ್ಕರ್ಮಿಗಳು, ಕಾರಿನ ಗಾಜನ್ನು ಒಡೆದು ಮಹಿಳೆಯನ್ನು ಮಕ್ಕಳ ಕಣ್ಣೆದುರೇ ಹೊರಗೆ ಎಳೆದು ತಂದು ಬಂದೂಕನ್ನು ಹಣೆಯ ಮೇಲಿಟ್ಟು ಬೆದರಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೆ ಆ ಕುಟುಂಬದ ಬಳಿಯಿದ್ದ ನಗದು, ಚಿನ್ನಾಭರಣ ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ದೋಚಿ ಪರಾರಿಯಾಗಿದ್ದರು.
ಡಿಎನ್‌ಎ, ಫೋನ್ ದತ್ತಾಂಶದಿಂದ ಸಿಕ್ಕಿಬಿದ್ದ ಆರೋಪಿಗಳು
ಈ ಘಟನೆ ಪಾಕಿಸ್ತಾನದಾದ್ಯಂತ ಭಾರಿ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತನಿಖಾಧಿಕಾರಿಗಳು ಮೊಬೈಲ್ ಫೋನ್ ದತ್ತಾಂಶಗಳು ಮತ್ತು ಅಪರಾಧ ನಡೆದ ಸ್ಥಳದಲ್ಲಿದ್ದ ಡಿಎನ್‌ಎ ಪುರಾವೆಗಳನ್ನು ಆಧರಿಸಿ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತನಿಖೆಯ ವೇಳೆ ಸಂತ್ರಸ್ತೆ ಇಬ್ಬರನ್ನೂ ಗುರುತಿಸಿದ್ದರು. ಆರೋಪಿಗಳಲ್ಲಿ ಒಬ್ಬನಾದ ಶಫ್ಕತ್ ಅಲಿ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಂಕೊಂಡಿದ್ದ. ಸೂಕ್ತ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ 2021ರ ಮಾರ್ಚ್‌ನಲ್ಲಿ ಉಗ್ರ ನಿಗ್ರಹ ನ್ಯಾಯಾಲಯವು ಇಬ್ಬರಿಗೂ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಹೈಕೋರ್ಟ್ ಮೆಟ್ಟಿಲೇರಿದ್ದ ಅಪರಾಧಿಗಳಿಗೆ ಹಿನ್ನಡೆ
ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಲಾಹೋರ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜನೆಯ ವಾದದಲ್ಲಿ ಲೋಪದೋಷಗಳಿವೆ ಹಾಗೂ ಸಾಕ್ಷ್ಯಗಳು ನಂಬಲರ್ಹವಲ್ಲ ಎಂದು ಅಪರಾಧಿಗಳ ಪರ ವಕೀಲರು ವಾದಿಸಿದ್ದರು. ಆದರೆ ಸರ್ಕಾರಿ ಅಭಿಯೋಜಕರು ಇದನ್ನು ತೀವ್ರವಾಗಿ ವಿರೋಧಿಸಿ, ಅಪರಾಧಿಗಳ ವಿರುದ್ಧ ಡಿಎನ್‌ಎ ಸೇರಿದಂತೆ ಅತ್ಯಂತ ಬಲವಾದ ವೈಜ್ಞಾನಿಕ ಪುರಾವೆಗಳಿದ್ದು, ಕೆಳ ನ್ಯಾಯಾಲಯವು ಎಲ್ಲಾ ಆಯಾಮಗಳನ್ನು ಪರಿಶೀಲಿಸಿಯೇ ತೀರ್ಪು ನೀಡಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಪ್ರಾಸಿಕ್ಯೂಷನ್ ವಾದವನ್ನು ಸಂಪೂರ್ಣವಾಗಿ ಪುರಸ್ಕರಿಸಿದ ಹೈಕೋರ್ಟ್ ನ್ಯಾಯಾಧೀಶರು ಅಪರಾಧಿಗಳ ಅರ್ಜಿಯನ್ನು ವಜಾಗೊಳಿಸಿ, ಮರಣದಂಡನೆಯನ್ನು ಕಾಯಂಗೊಳಿಸುವ ಮೂಲಕ ಕ್ರೂರಿಗಳಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.
ಇದನ್ನೂ ಓದಿ : ರಕ್ತದಿಂದ ಕೆಂಪಾಯ್ತು ಫ್ಯಾರೋ ದ್ವೀಪ : ಕ್ರೂರ ಸಂಪ್ರದಾಯಕ್ಕೆ 700ಕ್ಕೂ ಹೆಚ್ಚು ತಿಮಿಂಗಿಲ, ಡಾಲ್ಫಿನ್ ಬಲಿ!



















