ಟೋರ್ಶಾವ್ನ್ : ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾದ ಫ್ಯಾರೋ ದ್ವೀಪಗಳಲ್ಲಿ ‘ಗ್ರಿಂಡಾಡ್ರಾಪ್’ (ಅಥವಾ ಗ್ರಿಂಡ್) ಎಂದು ಕರೆಯಲಾಗುವ ವಿಕಿಂಗ್ ಕಾಲದ ವಾರ್ಷಿಕ ತಿಮಿಂಗಿಲ ಬೇಟೆ ಸಂಪ್ರದಾಯವು ಈ ಬಾರಿಯೂ ಅತ್ಯಂತ ಭೀಕರವಾಗಿ ನಡೆದಿದೆ. ಕೇವಲ ಒಂದೇ ದಿನದಲ್ಲಿ 700ಕ್ಕೂ ಹೆಚ್ಚು ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗಿದ್ದು, ಇಡೀ ಸಮುದ್ರದ ನೀರು ರಕ್ತದ ಮಡುವಾಗಿ ಮಾರ್ಪಟ್ಟಿದೆ. ಜಾಗತಿಕ ಮಟ್ಟದಲ್ಲಿ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಈ ಘೋರ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡಲ ತೀರದಲ್ಲಿ ನೆತ್ತರು ಹರಿಸಿದ ಭೀಕರ ಬೇಟೆ
ಸ್ಕಾಟ್‌ಲ್ಯಾಂಡ್‌ನಿಂದ ಕೇವಲ 200 ಮೈಲಿ ಉತ್ತರದಲ್ಲಿರುವ ಈ ದ್ವೀಪ ಸಮೂಹದಲ್ಲಿ ಬುಧವಾರ ಒಂದೇ ದಿನ ಮೂರು ಕಡೆಗಳಲ್ಲಿ ಬೃಹತ್ ಬೇಟೆ ನಡೆದಿದೆ ಎಂದು ಪರಿಸರ ಸಂರಕ್ಷಣಾ ಸಂಸ್ಥೆ ‘ಸೀ ಶೆಫರ್ಡ್’ ತಿಳಿಸಿದೆ. ಮೊದಲಿಗೆ ಸ್ಥಳೀಯ ಬೇಟೆಗಾರರು ಹಡಗು ಮತ್ತು ದೋಣಿಗಳ ಮೂಲಕ ಅಟ್ಲಾಂಟಿಕ್ ಬಿಳಿ-ಪಾರ್ಶ್ವದ ಡಾಲ್ಫಿನ್‌ಗಳು ಮತ್ತು ಪೈಲಟ್ ತಿಮಿಂಗಿಲಗಳನ್ನು ಸುತ್ತುವರಿದು, ಬಲವಂತವಾಗಿ ಆಳವಿಲ್ಲದ ಕರಾವಳಿ ತೀರಕ್ಕೆ ತಳ್ಳಿದ್ದಾರೆ. ಬಳಿಕ ತೀರದಲ್ಲಿ ಕಾಯುತ್ತಿದ್ದ ಬೇಟೆಗಾರರು ಚೂಪಾದ ಕೊಕ್ಕೆ ಮತ್ತು ಕತ್ತಿಗಳಿಂದ ಪ್ರಾಣಿಗಳ ದೇಹವನ್ನು ಸೀಳಿ ಕೊಂದಿದ್ದಾರೆ. ಈ ಭೀಕರ ದೃಶ್ಯವನ್ನು ಮಕ್ಕಳು ಸೇರಿದಂತೆ ನೂರಾರು ಸ್ಥಳೀಯರು ತೀರದಲ್ಲಿ ನಿಂತು ವೀಕ್ಷಿಸಿದ್ದು, ನಂತರ ಸತ್ತ ಪ್ರಾಣಿಗಳ ದೇಹಗಳನ್ನು ರಾಶಿ ಹಾಕಿ ಮಾಂಸಕ್ಕಾಗಿ ಹಂಚಿಕೊಳ್ಳಲಾಗಿದೆ.

ನಿಯಮ ಗಾಳಿಗೆ ತೂರಿ ಪ್ರಾಣಿಗಳಿಗೆ ನರಕಯಾತನೆ
ಈ ಬಾರಿಯ ಬೇಟೆಯು ಹಿಂದೆಂದಿಗಿಂತಲೂ ಅತ್ಯಂತ ಕ್ರೂರವಾಗಿತ್ತು ಎಂದು ವರದಿಗಳು ಹೇಳಿವೆ. ನಿಯಮಾವಳಿಗಳ ಪ್ರಕಾರ ಡಾಲ್ಫಿನ್‌ಗಳನ್ನು ಕೊಲ್ಲಲು ಬಳಸಬೇಕಾದ ‘ಸ್ಪೈನಲ್ ಲ್ಯಾನ್ಸ್’ (ಬೆನ್ನುಮೂಳೆಯ ಈಟಿಗಳು) ಕೊರತೆಯಿದ್ದ ಕಾರಣ, ಬೇಟೆಗಾರರು ಕೇವಲ ಕತ್ತಿಗಳಿಂದಲೇ ಪ್ರಾಣಿಗಳನ್ನು ಕೊಚ್ಚಿದ್ದಾರೆ. ಇದರಿಂದಾಗಿ ತಕ್ಷಣವೇ ಸಾಯದ ಕಡಲ ಜೀವಿಗಳು ದೀರ್ಘಕಾಲದವರೆಗೆ ನರಳಿ ನರಳಿ ರಕ್ತಸ್ರಾವದಿಂದ ಕೊನೆಯುಸಿರೆಳೆದಿವೆ.
ಹತ್ಯೆಯ ಭೀಕರತೆ ಎಷ್ಟಿತ್ತೆಂದರೆ, ಕಳೆದ ಇಡೀ ವರ್ಷದಲ್ಲಿ ಕೊಂದ ಒಟ್ಟು ಕಡಲ ಸಸ್ತನಿಗಳ ಮೂರನೇ ಎರಡರಷ್ಟು ಸಂಖ್ಯೆಯನ್ನು ಒಂದೇ ದಿನ ಸಾಯಿಸಲಾಗಿದೆ. ಇಷ್ಟೇ ಅಲ್ಲದೆ, ಈ ಭೀಕರತೆಯನ್ನು ಜಗತ್ತಿಗೆ ಮುಚ್ಚಿಡಲು ರಹಸ್ಯವಾಗಿ ಮೂರನೇ ಬೇಟೆಯನ್ನು ಆಯೋಜಿಸಲಾಗಿತ್ತು ಮತ್ತು ಇದನ್ನು ಚಿತ್ರೀಕರಿಸಲು ಯತ್ನಿಸಿದ ಪರಿಸರ ಸಂರಕ್ಷಣಾ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಆರೋಪಿಸಲಾಗಿದೆ.
ಒಂದೆಡೆ ಪರಿಸರವಾದಿಗಳು ಇದನ್ನು ಆಧುನಿಕ ಜಗತ್ತಿಗೆ ಬೇಡದ ಕಟುಕ ಸಂಪ್ರದಾಯ ಎನ್ನುತ್ತಿದ್ದರೆ, ಮತ್ತೊಂದೆಡೆ ಫ್ಯಾರೋ ದ್ವೀಪದ ಸರ್ಕಾರವು ಇದು ತಮ್ಮ 1000 ವರ್ಷಗಳ ಹಳೆಯ ಸಂಸ್ಕೃತಿ ಮತ್ತು ಆಹಾರದ ಮೂಲ ಎಂದು ಸಮರ್ಥಿಸಿಕೊಳ್ಳುತ್ತಿದೆ. ಈ ನಡುವೆ ಮತ್ತೊಂದು ಆಘಾತಕಾರಿ ಬೆಳವಣಿಗೆಯೂ ನಡೆದಿದೆ.
ಈ ಮಹಾ ಹತ್ಯಾಕಾಂಡದ ಮುನ್ನಾದಿನವೇ ಫ್ಯಾರೋ ದ್ವೀಪದ ಸಂಸತ್ತು ತನ್ನ ‘ಪ್ರಾಣಿ ಕಲ್ಯಾಣ ಕಾಯ್ದೆ’ಯನ್ನು ತರಾತುರಿಯಲ್ಲಿ ತಿದ್ದುಪಡಿ ಮಾಡಿದೆ. ಹೊಸ ಕಾಯ್ದೆಯಡಿ ಬೇಟೆಯಾಡಲಾಗುವ ಡಾಲ್ಫಿನ್‌ಗಳಿಗೆ ಇದ್ದ ಕಾನೂನು ರಕ್ಷಣೆಯನ್ನೇ ರದ್ದುಗೊಳಿಸಲಾಗಿದೆ. ಸಂಸತ್ತಿನ ಈ ಕ್ರಮವು ಕ್ರೌರ್ಯಕ್ಕೆ ಕಾನೂನುಬದ್ಧ ಪರವಾನಗಿ ನೀಡಿದಂತಾಗಿದೆ ಎಂದು ವಿಜ್ಞಾನಿಗಳು ಮತ್ತು ಪರಿಸರ ಪ್ರೇಮಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಯುರೋಪ್‌ನ ಸರ್ಕಾರಗಳು ಈ ವಾರ್ಷಿಕ ಕಟುಕತನಕ್ಕೆ ತಕ್ಷಣವೇ ನಿಷೇಧ ಹೇರಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ‘ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ’ ; ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ!



















