ಲಂಡನ್ : ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ನ್ಯೂಜಿಲೆಂಡ್‌ನ ದಂತಕಥೆ ಸ್ಯೂಜಿ ಬೇಟ್ಸ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಭಾರತದ ನಾಯಕಿ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಜೂನ್ 2ರಂದು ಟೌಂಟನ್‌ನ ಕೌಂಟಿ ಮೈದಾನದಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಹರ್ಮನ್‌ಪ್ರೀತ್ ಕೌರ್ ಈ ಅಪರೂಪದ ಮೈಲಿಗಲ್ಲು ತಲುಪಿದ್ದಾರೆ. ಇದು ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರು ಆಡಿದ 368ನೇ ಪಂದ್ಯವಾಗಿದೆ. ಈ ಮೂಲಕ 367 ಪಂದ್ಯಗಳನ್ನಾಡಿ ಅಗ್ರಸ್ಥಾನದಲ್ಲಿದ್ದ ನ್ಯೂಜಿಲೆಂಡ್‌ನ ಸ್ಯೂಜಿ ಬೇಟ್ಸ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ. ದುರಾದೃಷ್ಟವಶಾತ್, ದಾಖಲೆ ನಿರ್ಮಾಣವಾದ ಈ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸುವುದರ ಜೊತೆಗೆ ಸರಣಿಯನ್ನೂ ಕೈಚೆಲ್ಲಿದೆ. ಆದರೆ, ದೀರ್ಘಕಾಲದವರೆಗೆ ಯಾರಿಗೂ ಮುರಿಯಲು ಸುಲಭ ಸಾಧ್ಯವಾಗದಂತಹ ಬೃಹತ್ ದಾಖಲೆಯನ್ನು ನಿರ್ಮಿಸುವ ಮೂಲಕ ಕೌರ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದಾರೆ.
ಅಗ್ರ ಐದರಲ್ಲಿ ಇಬ್ಬರು ಭಾರತೀಯರ ಸಾಧನೆ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಅಗ್ರ ಐದು ಆಟಗಾರ್ತಿಯರ ಪಟ್ಟಿಯನ್ನು ಗಮನಿಸಿದರೆ, ಅದರಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿರುವುದು ವಿಶೇಷ. 368 ಪಂದ್ಯಗಳೊಂದಿಗೆ ಹರ್ಮನ್‌ಪ್ರೀತ್ ಕೌರ್ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿದ್ದರೆ, ಸ್ಯೂಜಿ ಬೇಟ್ಸ್ 367 ಪಂದ್ಯಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ 357 ಪಂದ್ಯಗಳೊಂದಿಗೆ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಭಾರತದ ಮಾಜಿ ನಾಯಕಿ ಹಾಗೂ ಲೆಜೆಂಡ್ ಮಿತಾಲಿ ರಾಜ್ ಅವರು 333 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು, ಇಂಗ್ಲೆಂಡ್‌ನ ಮಾಜಿ ನಾಯಕಿ ಷಾರ್ಲೆಟ್ ಎಡ್ವರ್ಡ್ಸ್ 309 ಪಂದ್ಯಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಹರ್ಮನ್‌ಪ್ರೀತ್ ಕೌರ್ ತಮ್ಮ ಈ ದಾಖಲೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.
ಇದನ್ನೂ ಓದಿ : ಕೇವಲ ಭಾರತ-ಪಾಕ್ ಪಂದ್ಯವನ್ನಲ್ಲ, ಇಡೀ ಟಿ20 ವಿಶ್ವಕಪ್ ಟೂರ್ನಿಯನ್ನು ಸಂಭ್ರಮಿಸಿ : ಸ್ಮೃತಿ ಮಂಧಾನ



















