ಮೈಸೂರು : ಜಿಲ್ಲೆಯ ನಂಜನಗೂಡು ತಾಲೂಕಿನ ವೀರೇಗೌಡನ ಹುಂಡಿ ಗ್ರಾಮದಲ್ಲಿ ಕಾಡುಪ್ರಾಣಿಗಳ ಉಪಟಳ ಮುಂದುವರಿದಿದ್ದು, ಚಿರತೆಯ ಓಡಾಟದಿಂದ ರೈತರು ಹಾಗೂ ಸಾರ್ವಜನಿಕರಲ್ಲಿ ಭಾರೀ ಆತಂಕ ಮನೆ ಮಾಡಿದೆ.
ಗ್ರಾಮದ ಪ್ರತ್ಯಕ್ಷ ಎಂಬುವರಿಗೆ ಸೇರಿದ ಕೃಷಿ ಭೂಮಿಯ ತೋಟದ ಮನೆಯ ಬಳಿ ಬಂದ ಚಿರತೆಯೊಂದು ಸಾಕು ನಾಯಿಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಗ್ರಾಮದ ಸುತ್ತಮುತ್ತ ಚಿರತೆಯ ನಿರಂತರ ಓಡಾಟ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ರೈತರು ಭಯದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ. ರಾತ್ರಿ ವೇಳೆ ಕೃಷಿ ಚಟುವಟಿಕೆಗಳು ಹಾಗೂ ತೋಟಗಳ ಕಾವಲು ಕಾರ್ಯಕ್ಕೂ ಅಡ್ಡಿಯಾಗುತ್ತಿದ್ದು, ಚಿರತೆಯನ್ನು ತಕ್ಷಣ ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ. ಕಾಡುಪ್ರಾಣಿಗಳ ಹಾವಳಿಯಿಂದ ರೈತರ ನಿದ್ರೆ ಹಾರಿಹೋಗಿದ್ದು, ಕುಟುಂಬ ಸದಸ್ಯರ ಸುರಕ್ಷತೆ ಕುರಿತೂ ಆತಂಕ ಹೆಚ್ಚಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಸಂಚಾರದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಅಧಿಕಾರಿಗಳು ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ. ಚಿರತೆಯ ಕಾಟದಿಂದ ನಂಜನಗೂಡು ಭಾಗದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ರಾ ದಂಪತಿ?



















