ಬೆಂಗಳೂರು : ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ಟಿ20 ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ ಇದ್ದು, ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಮುಂಚೂಣಿಯಲ್ಲಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ಭವಿಷ್ಯದ ದೃಷ್ಟಿಯಿಂದ ಬಿಸಿಸಿಐ ಆಯ್ಕೆ ಸಮಿತಿಯು ಈ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ತಂಡದಲ್ಲಿ ಯುವ ಆಟಗಾರರಿಗೆ ಮಣೆ ಹಾಕುವ ನಿರೀಕ್ಷೆಯಿದೆ.
ಸೂರ್ಯಕುಮಾರ್ ಕಳಪೆ ಫಾರ್ಮ್
ಇತ್ತೀಚೆಗಷ್ಟೇ ಮುಕ್ತಾಯಗೊಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ಅವರ ನಾಯಕತ್ವಕ್ಕೆ ಕುತ್ತು ತಂದಿದೆ. ಮುಂಬೈ ಇಂಡಿಯನ್ಸ್ ಪರ ಆಡಿದ 13 ಪಂದ್ಯಗಳಲ್ಲಿ ಸೂರ್ಯ ಕೇವಲ 270 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅವರ ಈ ನಿರಾಶಾದಾಯಕ ಪ್ರದರ್ಶನದಿಂದಾಗಿ ಮುಂಬೈ ತಂಡವು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ವಿಶ್ವಕಪ್ ಗೆದ್ದ ನಾಯಕನಾಗಿದ್ದರೂ ಸಹ, ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ವಿಫಲವಾಗಿರುವುದು ಆಯ್ಕೆಗಾರರ ಚಿಂತೆಗೆ ಕಾರಣವಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಸೂರ್ಯಕುಮಾರ್ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದ್ದರೂ, ನಾಯಕತ್ವದ ಬದಲಾವಣೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ನಾಯಕತ್ವದ ರೇಸ್‌ನಲ್ಲಿರುವ ಇತರ ಸ್ಟಾರ್ ಆಟಗಾರರು
ಮುಂದಿನ ಎರಡು ಟಿ20 ವಿಶ್ವಕಪ್ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ದೀರ್ಘಕಾಲಿಕ ನಾಯಕನ ಹುಡುಕಾಟದಲ್ಲಿದೆ. ಐಪಿಎಲ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನ ಹಾಗೂ ಅಪಾರ ಅನುಭವ ಹೊಂದಿರುವ ಶ್ರೇಯಸ್ ಅಯ್ಯರ್ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರ ಜೊತೆಗೆ ಯುವ ಆಟಗಾರರಾದ ತಿಲಕ್ ವರ್ಮಾ ಹಾಗೂ ಇಶಾನ್ ಕಿಶನ್ ಕೂಡ ನಾಯಕತ್ವದ ರೇಸ್‌ನಲ್ಲಿದ್ದಾರೆ. ಒಂದು ವೇಳೆ ಶ್ರೇಯಸ್ ಅಯ್ಯರ್ ಅವರಿಗೆ ನಾಯಕತ್ವ ಒಲಿದರೆ, ಉಪನಾಯಕನ ಪಟ್ಟವನ್ನು ತಿಲಕ್ ವರ್ಮಾ ಅಥವಾ ಇಶಾನ್ ಕಿಶನ್ ಪೈಕಿ ಒಬ್ಬರಿಗೆ ನೀಡುವ ಸಾಧ್ಯತೆ ದಟ್ಟವಾಗಿದೆ.
ತಂಡಕ್ಕೆ ಎಂಟ್ರಿ ಕೊಡಲಿರುವ ಯುವ ತಾರೆ ವೈಭವ್ ಸೂರ್ಯವಂಶಿ
ಮುಂಬರುವ 7 ಪಂದ್ಯಗಳ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯು ಜೂನ್ 26ರಿಂದ ಆರಂಭವಾಗಲಿದ್ದು, ಈ ಸರಣಿಗೆ ಐಪಿಎಲ್‌ನಲ್ಲಿ ಅಬ್ಬರಿಸಿದ ಕೇವಲ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ಒಲಿಯುವ ನಿರೀಕ್ಷೆಯಿದೆ. 2026ರ ಐಪಿಎಲ್‌ನಲ್ಲಿ ಬರೋಬ್ಬರಿ 237.20ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಸಿಡಿಸಿರುವ ವೈಭವ್ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ತಂಡದಲ್ಲಿ ಈಗಾಗಲೇ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಂತಹ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿದ್ದರೂ, ಎಡಗೈ ಆಟಗಾರ ವೈಭವ್ ಅವರಿಗೆ ಕನಿಷ್ಠ ಒಂದೆರಡು ಪಂದ್ಯಗಳಲ್ಲಾದರೂ ಅವಕಾಶ ನೀಡುವ ಸಾಧ್ಯತೆಯಿದೆ. ಇದರ ಜೊತೆಗೆ, ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ 2022ರಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಸಿಸಿಐ ತನ್ನ ಬಲಿಷ್ಠ ಮೊದಲ ಆಯ್ಕೆಯ ತಂಡವನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ : ‘ಏಕ್ ಬಿಹಾರಿ ಸಬ್ ಪೇ ಭಾರಿ’ : ಸೂರ್ಯವಂಶಿ ಜತೆಗಿನ ಕೊಹ್ಲಿ ಮಾತಿನ ವಿವರ ಬಹಿರಂಗಪಡಿಸಿದ RCB



















