ಲಂಡನ್ : ದಶಕಗಳಿಂದಲೂ ಬ್ರಿಟನ್‌ನಲ್ಲಿ ಭಾರೀ ಸದ್ದು ಮಾಡಿದ ‘ಗ್ರೂಮಿಂಗ್ ಗ್ಯಾಂಗ್ಸ್’ (ಬಾಲಕಿಯರನ್ನು ಮೌಖಿಕವಾಗಿ ಬುಟ್ಟಿಗೆ ಹಾಕಿ ಲೈಂಗಿಕವಾಗಿ ಬಳಸಿಕೊಳ್ಳುವ ಜಾಲ) ಹಗರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಕಹಿ ಸತ್ಯಗಳನ್ನು ಅಲ್ಲಿನ ಸಂಸತ್ತಿನಲ್ಲಿ ಸಂಸದ ರೂಪರ್ಟ್ ಲೋವ್ ಬಹಿರಂಗಪಡಿಸಿದ್ದಾರೆ. ಸಂಸತ್ತಿನಲ್ಲಿ ಸಂತ್ರಸ್ತ ಬಾಲಕಿಯರ ಲಿಖಿತ ಹೇಳಿಕೆಗಳನ್ನು ಓದಿದ ಅವರು, ಈ ಜಾಲದಿಂದ ನೂರಾರು ಹೆಣ್ಣುಮಕ್ಕಳು ಅನುಭವಿಸಿದ ನರಕಯಾತನೆ, ವ್ಯವಸ್ಥಿತ ಲೈಂಗಿಕ ಶೋಷಣೆ, ಬಲವಂತದ ಗೃಹಬಂಧನ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸ್ವತಂತ್ರ ಸಮಿತಿಯೊಂದು ನಡೆಸಿದ ತನಿಖೆಯ ವರದಿ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಇದು ಬ್ರಿಟನ್ ಇತಿಹಾಸದಲ್ಲಿ ಅತಿದೊಡ್ಡ ಬದಲಾವಣೆ ತರಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ನೂರಾರು ಜನರಿಂದ ಅತ್ಯಾಚಾರ
ಸಂಸದರು ಓದಿದ ಸಂತ್ರಸ್ತೆಯರ ಹೇಳಿಕೆಗಳು ಇಡೀ ಜಗತ್ತೇ ಬೆಚ್ಚಿಬೀಳುವಂತಿವೆ. ತನಿಖೆಯ ವೇಳೆ ಕಣ್ಣೀರು ಹಾಕಿದ ಮಹಿಳೆಯೊಬ್ಬರು, ತಾವು ಕೇವಲ 13 ವರ್ಷದವಳಾಗಿದ್ದಾಗ ಈ ದಂಧೆಗೆ ಸಿಲುಕಿದ್ದು, ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಕನಿಷ್ಠ 600 ರಿಂದ 700 ಪುರುಷರು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಮತ್ತೊಬ್ಬ ಸಂತ್ರಸ್ತೆ ತಾನು 15-20 ಹೆಣ್ಣುಮಕ್ಕಳನ್ನು ಪ್ರತ್ಯೇಕ ಪಂಜರಗಳಲ್ಲಿ (Cages) ಕೂಡಿ ಹಾಕಿರುವುದನ್ನು ಕಣ್ಣಾರೆ ಕಂಡಿರುವುದಾಗಿ ತಿಳಿಸಿದ್ದಾಳೆ. ಪ್ರಾಣಿಗಳನ್ನು ಬಳಸಿ ಅತ್ಯಾಚಾರ ಎಸಗಿದ ಅತ್ಯಂತ ಅಮಾನವೀಯ ಕೃತ್ಯಗಳನ್ನು ಕೆಲವು ದುರುಳರು ವಿಡಿಯೋ ಮಾಡಿ ನಗುತ್ತಾ ಬೆಟ್ಟಿಂಗ್ ಕಟ್ಟುತ್ತಿದ್ದರು ಎಂಬ ಆಘಾತಕಾರಿ ಸಂಗತಿಗಳು ಸಂಸತ್ತಿನ ಗಮನಕ್ಕೆ ಬಂದಿವೆ.

ಜನಾಂಗೀಯ ನಿಂದನೆ, ಧರ್ಮದ ದುರ್ಬಳಕೆ
ಈ ಅಪರಾಧ ಎಸಗುವ ಜಾಲಗಳಲ್ಲಿ ಪ್ರಮುಖವಾಗಿ ಪಾಕಿಸ್ತಾನಿ ಮೂಲದ ಪುರುಷರ ಪಾತ್ರ ಕಂಡುಬಂದಿದ್ದು, ಸಂತ್ರಸ್ತ ಹೆಣ್ಣುಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸಲು ಜನಾಂಗೀಯ ಮತ್ತು ಧರ್ಮದ ವಿಷಯಗಳನ್ನು ಬಳಸಿಕೊಳ್ಳಲಾಗುತ್ತಿತ್ತು. “ಬಿಳಿ ಚರ್ಮದ ಕ್ರಿಶ್ಚಿಯನ್ ಹುಡುಗಿಯರಿಗೆ ಯಾವುದೇ ನೈತಿಕ ಮೌಲ್ಯಗಳಿರುವುದಿಲ್ಲ” ಎಂದು ಹೇಳುತ್ತಾ ಅಪರಾಧಿಗಳು ತಮ್ಮ ಕ್ರೂರ ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಸಂತ್ರಸ್ತೆಯರು ಧರಿಸುತ್ತಿದ್ದ ಧಾರ್ಮಿಕ ಶಿಲುಬೆಯನ್ನು ಬಲವಂತವಾಗಿ ಕಿತ್ತುಹಾಕಿ, “ಈಗ ನಿನ್ನ ದೇವರು ಎಲ್ಲಿದ್ದಾನೆ? ನಿನ್ನನ್ನು ಕೈಬಿಟ್ಟನೇ?” ಎಂದು ಹೀಯಾಳಿಸುತ್ತಾ ಅವರ ನಂಬಿಕೆಯನ್ನು ಧ್ವಂಸಗೊಳಿಸುತ್ತಿದ್ದರು ಎಂದೂ ಸಂಸದರು ವಿವರಿಸಿದ್ದಾರೆ.
ಪೊಲೀಸರ ಮೇಲೆಯೇ ಆರೋಪ
ಈ ಹಗರಣದಲ್ಲಿ ಬ್ರಿಟನ್‌ನ ಸಾರ್ವಜನಿಕ ಆಡಳಿತ ಸಂಸ್ಥೆಗಳು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ಅಸಹಕಾರ ಹಾಗೂ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ. ಅತ್ಯಾಚಾರಕ್ಕೊಳಗಾಗಿ ರಕ್ತಸಿಕ್ತ ಸ್ಥಿತಿಯಲ್ಲಿದ್ದ 15 ವರ್ಷದ ಬಾಲಕಿಯೊಬ್ಬಳು ಆಸ್ಪತ್ರೆಗೆ ದಾಖಲಾದಾಗ, ಭಯದಿಂದ ಸತ್ಯ ಮರೆಮಾಚಿದರೂ ವೈದ್ಯಕೀಯ ಸಿಬ್ಬಂದಿ ಯಾವುದೇ ಪ್ರಶ್ನೆ ಕೇಳದೆ ಕೇವಲ ಮಾತ್ರೆ ನೀಡಿ ಮನೆಗೆ ಕಳುಹಿಸಿದ್ದರು. ಎಲ್ಲಕ್ಕಿಂತ ಆಘಾತಕಾರಿ ಎಂದರೆ, ತಾನು ದೇಶದ ಬೇರೆ ಬೇರೆ ಭಾಗಗಳಲ್ಲಿ ಹಲವು ಪೊಲೀಸ್ ಅಧಿಕಾರಿಗಳಿಂದಲೇ ಅತ್ಯಾಚಾರಕ್ಕೊಳಗಾಗಿದ್ದಾಗಿ ಸಂತ್ರಸ್ತೆಯೊಬ್ಬಳು ನೇರ ಆರೋಪ ಮಾಡಿದ್ದಾಳೆ. ಕೇವಲ ಚರ್ಚೆ ಮಾಡುವುದನ್ನು ಬಿಟ್ಟು ಬ್ರಿಟನ್ ಸರ್ಕಾರ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೂಪರ್ಟ್ ಲೋವ್ ಸಂಸತ್ತಿನಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪ್ರಯಾಗ್‌ರಾಜ್‌ನಲ್ಲಿ ಭೀಕರ ನರಮೇಧ – ಒಂದೇ ಮನೆಯಲ್ಲಿ 4 ಹೆಣಗಳು.. ‘ಬಂಟಿ-ಬಬ್ಲಿ’ ಚೀಟಿ : ಎಲ್ಲವೂ ನಿಗೂಢ!



















