ನವದೆಹಲಿ : ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಇಂದು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಬಿಜೆಪಿಯೊಂದಿಗಿನ ತಮ್ಮ 6 ವರ್ಷಗಳ ಸುದೀರ್ಘ ಸಂಬಂಧವನ್ನು ಕೊನೆಗೊಳಿಸಿದ್ದಾರೆ.
ತಮಿಳುನಾಡು ರಾಜಕಾರಣದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಆಕ್ರಮಣಕಾರಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಬಿಜೆಪಿಗೆ ದಿಢೀರ್ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದೆಹಲಿಗೆ ಭೇಟಿ ನೀಡಿರುವ ಅವರು ಪಕ್ಷದ ಉಸ್ತುವಾರಿ ಹಾಗೂ ಹಿರಿಯ ನಾಯಕರಾದ ನಿತಿನ್ ನಬಿನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶಗಳು ಮತ್ತು ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನೆಂಬುದರ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ರಾಜಕೀಯ ವಲಯದಲ್ಲಿ ಅವರ ಈ ನಿರ್ಧಾರಕ್ಕೆ ಹಲವು ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅಣ್ಣಾಮಲೈ ಅವರು ‘ಎನ್ ಮಣ್ಣ್, ಎನ್ ಮಕ್ಕಳ್’ (ನನ್ನ ಮಣ್ಣು, ನನ್ನ ಜನ) ಪಾದಯಾತ್ರೆ ಸೇರಿದಂತೆ ಭಾರಿ ಹೋರಾಟ ನಡೆಸಿದ್ದರು. ಆದರೆ, ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಯಶಸ್ಸು ಸಾಧಿಸದ ಹಿನ್ನೆಲೆಯಲ್ಲಿ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ಅಣ್ಣಾಮಲೈ ಅವರ ಆಕ್ರಮಣಕಾರಿ ಶೈಲಿಯ ರಾಜಕಾರಣದ ವಿರುದ್ಧ ತಮಿಳುನಾಡು ಬಿಜೆಪಿಯ ಹಿರಿಯ ನಾಯಕರಲ್ಲೇ ತೀವ್ರ ಅಸಮಾಧಾನವಿತ್ತು. ಮೈತ್ರಿಕೂಟದ ನಿರ್ಧಾರಗಳು ಮತ್ತು ಪಕ್ಷದ ಆಂತರಿಕ ನಾಯಕತ್ವದ ನಡುವಿನ ಗೊಂದಲಗಳೇ ರಾಜೀನಾಮೆಗೆ ಮುಖ್ಯ ಕಾರಣ ಎಂದು ಕೂಡ ಹೇಳಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಅಣ್ಣಾಮಲೈ ದೆಹಲಿಯಲ್ಲೇ ಬೀಡುಬಿಟ್ಟಿದ್ದರು. ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ತಮಿಳುನಾಡು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು. ತಾವು ಬೇರೆ ಪಕ್ಷ ಕಟ್ಟುವ ಬಗ್ಗೆ ಪ್ರಶ್ನೆ ಬಂದಾಗಲೂ ಅವರು ಸ್ಪಷ್ಟವಾಗಿ ಉತ್ತಿರಿಸಿರಲಿಲ್ಲ. ಕಾದು ನೋಡಿ ಎಂದಷ್ಟೇ ಹೇಳಿದ್ದರು. ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ಅಧಿಕೃತವಾಗಿ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಹೈಕಮಾಂಡ್ ನಾಯಕರು ಅವರನ್ನು ಮನವೊಲಿಸಲು ಪ್ರಯತ್ನಿಸಿದರೂ, ಅಣ್ಣಾಮಲೈ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು ಎನ್ನಲಾಗಿದೆ.
ಅಣ್ಣಾಮಲೈ ರಾಜಕೀಯದಿಂದ ಬ್ರೇಕ್ ಪಡೆಯಲಿದ್ದಾರೆಯೇ ಅಥವಾ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ಜೊತೆ ಕೈಜೋಡಿಸಲಿದ್ದಾರೆಯೇ ಎಂಬುದು ಸದ್ಯದ ಕುತೂಹಲವಾಗಿದೆ. ಅವರು ಮತ್ತೆ ಪೊಲೀಸ್ ಸೇವೆಗೆ ಮರಳುವ ಸಾಧ್ಯತೆ ಇಲ್ಲ ಎಂದು ಆಪ್ತ ಮೂಲಗಳು ಸ್ಪಷ್ಟಪಡಿಸಿವೆ. ಅವರು ಹೊಸ ಪಕ್ಷ ಕಟ್ಟುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಬಿಜೆಪಿ “ಹೈ” ಆಫರ್‌ಗಳಿಗೆ ನೋ ಎಂದ ಅಣ್ಣಾಮಲೈ : ಹೊಸ ಪಕ್ಷ ಸ್ಥಾಪನೆಗೆ ತಮಿಳುನಾಡು ಸಿಂಗಂ ಸಜ್ಜು!



















