ದಾವಣಗೆರೆ : ಸಚಿವ ಜಮೀರ್ ಅಹ್ಮದ್ ವಿರುದ್ಧ ಪಕ್ಷವಿರೋಧಿ ಆರೋಪ ಕೇಳಿಬಂದಿದೆ. ಸಚಿವ ಸಂಪುಟ ರಚನೆ ಹೊತ್ತಲ್ಲೇ ಜಮೀರ್ರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ಸಂಬಂಧ ಮಾಜಿ ಸಚಿವ ಜಮೀರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೌದು.. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಹಾಗೂ ದಾವಣಗೆರೆ ಮಾಜಿ ಮೇಯರ್ ಕೆ.ಚಮನ್ ಸಾಬ್ ಎನ್ನುವರು ಹೈಕಮಾಂಡ್ಗೆ ಪತ್ರದ ಮೂಲಕ ಜಮೀರ್ ವಿರುದ್ಧ ದೂರು ನೀಡಿದ್ದು, ಪಕ್ಷ ವಿರೋಧಿ ಆಡಿಯೋವನ್ನು ತನಿಖೆ ಮಾಡಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಹಾಗೂ ದಾವಣಗೆರೆ ಮಾಜಿ ಮೇಯರ್ ಕೆ.ಚಮನ್ ಸಾಬ್ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದು, ದಾವಣಗೆರೆ ದಕ್ಷಿಣ ಉಪಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಮುಸ್ಲಿಮರು ಮನೆ ಬಿಟ್ಟು ಹೊರಹೋಗದಂತೆ ಹೇಳಿದ್ದಾರೆ. ಈ ಮೂಲಕ ಅಭ್ಯರ್ಥಿಯನ್ನು ಸೋಲಿಸಲು ಮಾಜಿ ಸಚಿವ ಜಮೀರ್ ಹುನ್ನಾರ ನಡೆಸಿದ್ದಾರೆ. ಪಕ್ಷದ್ರೋಹಿ ಜಮೀರ್ರನ್ನ ತಕ್ಷಣ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿಗೆ ಆಗ್ರಹಿಸಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿಲ್ಲವೆಂದು ಈಗಾಗಲೇ ದಾವಣಗೆರೆ ದಕ್ಷಿಣ ಕ್ಷೇತ್ರ ಬೈ ಎಲೆಕ್ಷನ್ನಿಂದ ಜಮೀರ್ ದೂರ ಉಳಿದಿದ್ದರು. ಕ್ಷೇತ್ರಕ್ಕೆ ಬಂದಿದ್ದರೂ ಸಹ ಪ್ರಚಾರ ಮಾಡಿರಲಿಲ್ಲ. ಈ ಸಂಬಂಧ ಹೈಕಮಾಂಡ್ ಗರಂ ಆಗಿದ್ದು, ಕಟ್ಟು ನಿಟ್ಟಿನ ಕ್ರಮಕ್ಕೆ ಚಿಂತನೆ ನಡೆಸಿತ್ತು. ಇದೀಗ ಕಾಂಗ್ರೆಸ್ನಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಜಮೀರ್ ಅಹಮ್ಮದ್ ಖಾನ್ ವಿರುದ್ಧ ಪಕ್ಷ ವಿರೋಧಿ ಚಟವಟಿಕೆ ಆರೋಪ ಕೇಳಿಬಂದಿರುವುದರಿಂದ ಅವರ ಸಚಿವ ಸ್ಥಾನಕ್ಕೆ ಕುತ್ತ ಬರುವ ಸಾಧ್ಯತೆಗಳಿವೆ.
ವೈರಲ್ ಆಡಿಯೋದಲ್ಲಿ ಏನಿದೆ?
ದಾವಣಗೆರೆ ಉಪಚುನಾವಣೆ ವೇಳೆ ಅಲ್ಪಸಂಖ್ಯಾತರು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದರು. ತಮಗೆ ಟಿಕೆಟ್ ಸಿಕ್ಕಿಲ್ಲ ಎಂದು ನಾಯಕರು ಕೂಡ ಬೇಸರ ಹೋರಹಾಕಿದ್ದರು. ಆ ವೇಳೆ ಕೈ ಪಡೆಗೆ ಒಳೇಟು ಕೊಡಲು ತಂತ್ರವೂ ನಡೆದಿತ್ತು ಅನ್ನೋ ಮಾತು ಹರಿದಾಡಿತ್ತು. ಇದೀಗ ಮುಸ್ಲಿಂ ಮುಖಂಡರ ಜೊತೆಗೆ ಜಮೀರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಮುಸ್ಲಿಮರನ್ನ ಕಾಂಗ್ರೆಸ್ಗೆ ವೋಟ್ ಹಾಕದಂತೆ ತಡೆಯಬೇಕು ಎಂಬ ಚರ್ಚೆ ಮಾಡಲಾಗಿದೆ. ದಾವಣಗೆರೆ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಜೊತೆ ಜಮೀರ್ ಮಾತನಾಡಿದ್ದಾರೆಂದು ಈ ಆಡಿಯೋವನ್ನ ಬಿಂಬಿಸಲಾಗ್ತಿದೆ. ಈ ಆಡಿಯೋದಲ್ಲಿ ಬಂಡಾಯ ಅಭ್ಯರ್ಥಿಯಾಗಿ, ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಪೈಲ್ವಾನ್ ಬಗ್ಗೆಯೂ ಮಾತನಾಡಲಾಗಿದೆ.
ಜಮೀರ್ ಅಹಮ್ಮದ್ ಕೊಟ್ಟ ಸ್ಪಷ್ಟನೆ ಏನು?
ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಜಮೀರ್, ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಕುರಿತ ಆಡಿಯೋ ನಕಲಿ ಆಗಿದೆ. ಎಐ ತಂತ್ರಜ್ಞಾನ ಬಳಸಿ ಆಡಿಯೋ ಮಾಡಲಾಗಿದೆ , ಇದೊಂದು ರಾಜಕೀಯ ಷಡ್ಯಂತ್ರ ಅಂತಾ ಜಮೀರ್ ಹೇಳ್ತಿದ್ದಾರೆ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಆಗಿದೆ, ಸೈಬರ್ ಠಾಣೆಗೆ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು, ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಕ್ರಮ ಆಗುತ್ತೆ. ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ : ದೆಹಲಿಯಲ್ಲಿ ಗರಿಗೆದರಿದ ಸಂಪುಟ ಪುನಾರಚನೆ ಸರ್ಕಸ್ – ಯಾರಿಗೆಲ್ಲ ಮಂತ್ರಿಗಿರಿ? ಇಲ್ಲಿದೆ ಪಟ್ಟಿ



















