ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ಇತ್ತೀಚೆಗೆ ಆಸಕ್ತಿದಾಯಕ ‘ಡೆತ್ ಓವರ್ ಚಾಲೆಂಜ್’ ಒಂದರಲ್ಲಿ ಭಾಗವಹಿಸಿದ್ದು, ಕೊನೆಯ ಐದು ಓವರ್‌ಗಳಲ್ಲಿ 50 ರನ್‌ಗಳನ್ನು ಡಿಫೆಂಡ್ ಮಾಡಲು ತಮಗೆ ನೆಚ್ಚಿನ ಐವರು ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ.
ಕ್ರಿಕ್‌ಬಝ್ ನಡೆಸಿದ ಈ ಸಂವಾದದಲ್ಲಿ, 16 ರಿಂದ 20ನೇ ಓವರ್‌ವರೆಗಿನ ನಿರ್ಣಾಯಕ ಹಂತದಲ್ಲಿ ಬೌಲಿಂಗ್ ಮಾಡಲು ಪ್ರಸ್ತುತ ಸಕ್ರಿಯವಾಗಿರುವ ಶ್ರೇಷ್ಠ ಬೌಲರ್‌ಗಳ ಪಡೆಯನ್ನೇ ಅವರು ಹೆಸರಿಸಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ವಿಶ್ವದ ಶ್ರೇಷ್ಠ ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್ ಅವರನ್ನು ಮೊದಲ ಆಯ್ಕೆಯಾಗಿ (16ನೇ ಓವರ್‌ಗೆ) ಹೆಸರಿಸಿರುವುದು ಎಲ್ಲರ ಗಮನ ಸೆಳೆದಿದೆ.
ಕೊನೆಯ ಐದು ಓವರ್‌ಗಳಲ್ಲಿ ಎದುರಾಳಿ ತಂಡಕ್ಕೆ ಕೇವಲ 50 ರನ್‌ಗಳ ಗುರಿ ಇದ್ದಾಗ, 16ನೇ ಓವರ್ ಬೌಲ್ ಮಾಡಲು ಭುವನೇಶ್ವರ್ ಅವರು ಸುನಿಲ್ ನರೈನ್ ಅವರನ್ನು ಆಯ್ಕೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೇವಲ 6.50ರ ಅತ್ಯುತ್ತಮ ಎಕಾನಮಿ ಹೊಂದಿರುವ ನರೈನ್, ಆರಂಭಿಕ ಒತ್ತಡ ಹೇರಲು ಹಾಗೂ ರನ್ ವೇಗಕ್ಕೆ ಕಡಿವಾಣ ಹಾಕಲು ಹೇಳಿಮಾಡಿಸಿದ ಆಟಗಾರ ಎಂದು ಭುವನೇಶ್ವರ್ ವಿಶ್ಲೇಷಿಸಿದ್ದಾರೆ. ಈ ಹಂತದಲ್ಲಿ ಕರಾರುವಕ್ಕಾದ ಬೌಲಿಂಗ್ ದಾಳಿಯ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ನರೈನ್‌ಗಿಂತ ಉತ್ತಮ ಆಯ್ಕೆ ಬೇರೊಂದಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.
ಹೇಜಲ್ವುಡ್ ಬೆಸ್ಟ್
ತಮ್ಮ ಬೌಲಿಂಗ್ ದಾಳಿಯ ಮುಂದಿನ ಎರಡು ಓವರ್‌ಗಳಿಗಾಗಿ ಭುವನೇಶ್ವರ್ ಆಸ್ಟ್ರೇಲಿಯಾದ ಇಬ್ಬರು ದೈತ್ಯ ವೇಗಿಗಳ ಮೊರೆ ಹೋಗಿದ್ದಾರೆ. 17ನೇ ಓವರ್ ಬೌಲ್ ಮಾಡಲು ತಮ್ಮ ಆರ್‌ಸಿಬಿ ತಂಡದ ಸಹ ಆಟಗಾರ ಜೋಶ್ ಹ್ಯಾಝಲ್‌ವುಡ್ ಅವರನ್ನು ಅವರು ಆಯ್ಕೆ ಮಾಡಿದ್ದಾರೆ. ಹ್ಯಾಝಲ್‌ವುಡ್ ಅವರ ಕರಾರುವಕ್ಕಾದ ಯಾರ್ಕರ್‌ಗಳು ಹಾಗೂ ರನ್ ನಿಯಂತ್ರಿಸುವ ಸಾಮರ್ಥ್ಯವು ಈ ಹಂತದಲ್ಲಿ ತಂಡಕ್ಕೆ ಹೆಚ್ಚು ನೆರವಾಗಲಿದೆ ಎಂದಿದ್ದಾರೆ. ಇನ್ನು 18ನೇ ಓವರ್‌ಗಾಗಿ ವಿಕೆಟ್ ಟೇಕಿಂಗ್ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ಹೆಸರಿಸಿದ್ದಾರೆ. ರನ್ ನಿಯಂತ್ರಣದ ಜೊತೆಗೆ ನಿರ್ಣಾಯಕ ಘಟ್ಟದಲ್ಲಿ ವಿಕೆಟ್ ಕಬಳಿಸಿ ಪಂದ್ಯದ ಗತಿಯನ್ನು ಬದಲಾಯಿಸುವ ಸಾಮರ್ಥ್ಯ ಸ್ಟಾರ್ಕ್ ಅವರಿಗಿದೆ ಎಂದು ಭುವನೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
19ನೇ ಓವರ್‌ಗೆ ಬುಮ್ರಾ
ಪಂದ್ಯದ ಅತ್ಯಂತ ನಿರ್ಣಾಯಕ 19ನೇ ಓವರ್‌ಗಾಗಿ ಭುವನೇಶ್ವರ್ ಕುಮಾರ್ ಅವರು ಯಾವುದೇ ಹಿಂಜರಿಕೆಯಿಲ್ಲದೆ ಭಾರತದ ಪ್ರಮುಖ ಅಸ್ತ್ರ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಿದ್ದಾರೆ. ಬುಮ್ರಾ ಅವರ ಅದ್ಭುತ ಡೆತ್ ಓವರ್ ಬೌಲಿಂಗ್ ಕೌಶಲ್ಯದ ಬಗ್ಗೆ ಅರಿವಿರುವ ಭುವಿ, ಆ ಹಂತದಲ್ಲಿ ಬುಮ್ರಾ ಅವರೇ ಸರ್ವಶ್ರೇಷ್ಠ ಆಯ್ಕೆ ಎಂದಿದ್ದಾರೆ. ಇನ್ನು ಅಂತಿಮ 20ನೇ ಓವರ್ ಬೌಲ್ ಮಾಡಲು ತಮ್ಮನ್ನು ತಾವು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದರೂ, ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಇಶಾನ್ ಮಾಲಿಂಗ ಅವರಿಗೆ ಮಣೆಹಾಕಿದ್ದಾರೆ. ಪ್ರಸಕ್ತ ಐಪಿಎಲ್ ಋತುವಿನಲ್ಲಿ ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲಿಯೂ ಕಡಿಮೆ ಮೊತ್ತವನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿರುವ ಹಾಗೂ ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿರುವ ಇಶಾನ್ ಅವರ ಸಾಮರ್ಥ್ಯವನ್ನು ಭುವನೇಶ್ವರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಟಿ20 ಕ್ರಿಕೆಟ್, IPL ನಿಯಮಗಳಲ್ಲಿ ಮಹತ್ವದ ಬದಲಾವಣೆಗೆ ಸಚಿನ್ ಆಗ್ರಹ!



















