ಬೆಳಗಾವಿ : ರಾಜ್ಯ ವಿಪತ್ತು ನಿರ್ವಹಣಾ ಪಡೆ(SDRF)ಯ ಸಿಪಿಐ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸಿಪಿಐ ಶ್ರೀಶೈಲ್ ಚೌಗಲೆ (37) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ.
ಬೆಳಗಾವಿಯ ರಾಣಿ ಚನ್ನಮ್ಮ ನಗರದ ಅವರ ಮನೆಯ ರೂಮಿನಲ್ಲಿ ಶ್ರೀಶೈಲ್ ಚೌಗಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಗಿಲು ಬಡಿದರೂ ತೆಗೆಯದೇ ಇದ್ದುದರಿಂದ ಅನುಮಾನಗೊಂಡ ಶ್ರೀಶೈಲ್ ಅವರ ಪತ್ನಿ ತಕ್ಷಣವೇ ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅವರು ರೂಮಿನ ಬಾಗಿಲು ಮುರಿದು ಒಳಗೆ ನೋಡಿದಾಗ ವಿಷಯ ಗೊತ್ತಾಗಿದೆ.
ತಕ್ಷಣ ಅವರನ್ನು ಹೊರತೆಗೆದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲೇ ಅವರು ನಿಧನರಾಗಿದ್ದರು. ಈ ಕುರಿತು ವೈದ್ಯರು ಸ್ಪಷ್ಟಪಡಿಸಿದರು. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಶ್ರೀಶೈಲ್ ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : BMTC ಮಹಾ ಎಡವಟ್ಟು – ಮಹಿಳಾ ಪ್ರಯಾಣಿಕರಿಗೆ ಪುರುಷರ ದೈನಂದಿನ ಪಾಸ್ ವಿತರಣೆ!


















