ಬೆಂಗಳೂರು : ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳ ನಡುವೆ, ಸಿದ್ದರಾಮಯ್ಯ ನಾಳೆ (ಗುರುವಾರ) ಬೆಳಗ್ಗೆ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಆಯೋಜಿಸಿದ್ದಾರೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೆಹಲಿ ಪ್ರವಾಸದ ವೇಳಾಪಟ್ಟಿಯಲ್ಲಿ ಕೊನೆ ಕ್ಷಣದ ಬದಲಾವಣೆ ಕಂಡುಬಂದಿದೆ. ಆರಂಭದಲ್ಲಿ ಇಂದು ಮಧ್ಯಾಹ್ನ ಬೆಂಗಳೂರಿಗೆ ಮರಳಬೇಕಿದ್ದ ಅವರು, ಇದೀಗ ನಾಳೆ ಮುಂಜಾನೆ ದೆಹಲಿಯಿಂದ ಹೊರಟು ಸಿಎಂ ಅವರ ಅಧಿಕೃತ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ದರಾಮಯ್ಯ ನಾಳೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಮಂಗಳವಾರ ದೆಹಲಿಯಲ್ಲಿ ನಡೆದ ಹೈಕಮಾಂಡ್ ನೇತೃತ್ವದ ಸಭೆಯಲ್ಲಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಕ್ಕೆ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸೂಚಿಸಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯಸಭಾ ಸ್ಥಾನದ ಜೊತೆಗೆ ಸಿದ್ದರಾಮಯ್ಯಗೆ ಪಕ್ಷದಲ್ಲಿ ಕೇಂದ್ರ ಪಾತ್ರ ನೀಡಲು ಮುಂದಾಗಿದೆ. ಆದರೆ ಸಿದ್ದರಾಮಯ್ಯ ಕೇಂದ್ರ ಪಾತ್ರವನ್ನು ತಕ್ಷಣ ಒಪ್ಪಿಕೊಂಡಿಲ್ಲ. ರಾಹುಲ್ ಗಾಂಧಿಯವರಿಂದಲೇ ಸಂದೇಶ ಬಂದಿದ್ದರಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸದ್ಯ ಡಿಕೆಶಿ ಜೊತೆಗೆ ಸತೀಶ್ ಜಾರಕಿಹೊಳಿ ಕೂಡ ದೆಹಲಿಯಲ್ಲೇ ಉಳಿದುಕೊಂಡಿದ್ದು, ಇಂದು ಹೈಕಮಾಂಡ್ ಜೊತೆ ಚರ್ಚಿಸುವ ಸಾಧ್ಯತೆಯಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆ ಸತೀಶ್ ಜಾರಕಿಹೊಳಿ ಅವರಿಗೆ ಒಲಿಯಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಡಿಕೆಶಿಗೆ ಸಿಎಂ ಪಟ್ಟ ಫಿಕ್ಸ್? ಸಿದ್ದು ಮುಂದಿನ ನಡೆ ಏನು?



















