ಬೆಂಗಳೂರು : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಆಧಾರ್ ಕಾರ್ಡ್ ಬಳಸುವ ಗ್ರಾಹಕರಿಗಾಗಿ ಹೊಸ ಆ್ಯಪ್ ಆರಂಭಿಸಿದೆ. ಇದುವರೆಗೆ ಡಿಜಿಟಲ್ ಆಧಾರ್ ಕಾರ್ಡ್ ಗಾಗಿ ಬಳಸುತ್ತಿದ್ದ ಎಂ ಆಧಾರ್ (mAadhaar) ಆ್ಯಪ್ ಬದಲಿಗೆ, ಆಧಾರ್ (Aadhaar) ಎಂಬ ಹೊಸ ಆ್ಯಪ್ ಆರಂಭಿಸಿದೆ. ಶೀಘ್ರದಲ್ಲೇ ಎಂ ಆಧಾರ್ ಆ್ಯಪ್ ಸ್ಥಗಿತಗೊಳ್ಳಲಿದ್ದು, ಹೊಸ ಆ್ಯಪ್ ಬಳಸಿಕೊಂಡು ಹಲವು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಪ್ರಾಧಿಕಾರ ತಿಳಿಸಿದೆ. ಹೊಸ ಆ್ಯಪ್ ಸುರಕ್ಷತೆ ದೃಷ್ಟಿಯಿಂದಲೂ ಉತ್ತಮವಾಗಿದೆ ಎಂದೇ ಹೇಳಲಾಗುತ್ತಿದೆ.
ಹೊಸ ಆ್ಯಪ್ ನಲ್ಲಿ ಏನೆಲ್ಲ ಅನುಕೂಲಗಳು?
- ಕೇವಲ ಮೊಬೈಲ್ ಒಟಿಪಿಯನ್ನು ಅವಲಂಬಿಸುವ ಬದಲಿಗೆ, ಇದರಲ್ಲಿ ಫೇಸ್ ಅಥೆಂಟಿಕೇಶನ್ ವ್ಯವಸ್ಥೆ ತರಲಾಗಿದೆ. ಇದು ನಿಮ್ಮ ಐಡೆಂಟಿಟಿಯನ್ನು ಮತ್ತಷ್ಟು ಸುರಕ್ಷಿತವಾಗಿಸುತ್ತದೆ.
- ಇದರಲ್ಲಿ ನಿಮ್ಮ ಆಧಾರ್ ಸಂಖ್ಯೆ ಮರೆಯಾಗಿರುವ ಕ್ಯೂಆರ್ ಕೋಡ್ ಇರಲಿದ್ದು, ಹೋಟೆಲ್, ಆಸ್ಪತ್ರೆ ಅಥವಾ ಸರ್ಕಾರಿ ಕಚೇರಿಗಳಲ್ಲಿ ಭೌತಿಕ ಕಾರ್ಡ್ ನೀಡದೆ ಸುರಕ್ಷಿತವಾಗಿ ಸ್ಕ್ಯಾನ್ ಮೂಲಕ ದೃಢೀಕರಣ ಮುಗಿಸಬಹುದು.
- ‘ಒಂದು ಕುಟುಂಬ – ಒಂದು ಆ್ಯಪ್’ ಪರಿಕಲ್ಪನೆಯಡಿ, ಒಂದೇ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಕುಟುಂಬದ ಗರಿಷ್ಠ 5 ಸದಸ್ಯರ ಆಧಾರ್ ಪ್ರೊಫೈಲ್ ಗಳನ್ನು ಈ ಆ್ಯಪ್ ನಲ್ಲಿ ನಿರ್ವಹಿಸಬಹುದು. ಪೋಷಕರು ತಮ್ಮ ಮಕ್ಕಳ ಆಧಾರ್ ವಿವರಗಳನ್ನು ಇದರಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದು.
- ನಿಮ್ಮ ಫಿಂಗರ್ ಪ್ರಿಂಟ್ ಹಾಗೂ ಫೇಸ್ ಡೇಟಾವನ್ನು ಆ್ಯಪ್ ಮೂಲಕವೇ ಕೆಲವೇ ಸೆಕೆಂಡುಗಳಲ್ಲಿ ಲಾಕ್ ಅಥವಾ ಅನ್ ಲಾಕ್ ಮಾಡಬಹುದು. ಇದರಿಂದ ನಿಮ್ಮ ಅನುಮತಿಯಿಲ್ಲದೆ ಯಾರೂ ಬಯೋಮೆಟ್ರಿಕ್ ಬಳಸಲು ಸಾಧ್ಯವಾಗುವುದಿಲ್ಲ.
- ಮೊದಲು ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಲು ಆಧಾರ್ ಕೇಂದ್ರಕ್ಕೇ ಹೋಗಬೇಕಿತ್ತು. ಆದರೆ ಹೊಸ ಆ್ಯಪ್ ನಲ್ಲಿ ಫೇಸ್ ಅಥೆಂಟಿಕೇಶನ್ ಬಳಸಿ ಮೊಬೈಲ್ ಸಂಖ್ಯೆ ನವೀಕರಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ.
- ನಿಮ್ಮ ಆಧಾರ್ ಅನ್ನು ಎಲ್ಲೆಲ್ಲಿ ಮತ್ತು ಯಾವಾಗ ಬಳಸಲಾಗಿದೆ ಅಥವಾ ವೆರಿಫಿಕೇಶನ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಆ್ಯಪ್ ನಲ್ಲೇ ಟ್ರ್ಯಾಕ್ ಮಾಡಬಹುದು.
ಇದನ್ನೂ ಓದಿ : ಸಿಎಂ ಸಿದ್ದು ರಾಜೀನಾಮೆಗೆ ಕೌಂಟ್‌ಡೌನ್ ; ನಾಳೆ ಸಚಿವರು, ಶಾಸಕರ ಜೊತೆ ಕೊನೆ ಬ್ರೇಕ್ ಫಾಸ್ಟ್ ಮೀಟಿಂಗ್!



















