ಬೆಂಗಳೂರು : ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ (GBIT/GBDA) ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಹಿತಾಸಕ್ತಿ ಸಂಘರ್ಷ, ಅಕ್ರಮ ಭೂ ವ್ಯವಹಾರಗಳು ಮತ್ತು ಬೇನಾಮಿ ಹೂಡಿಕೆಗಳ ಅನುಮಾನದ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಹಾಗೂ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT)ಗೆ ಗಂಭೀರ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಾವಿರಾರು ಕೋಟಿ ಮೌಲ್ಯದ GBIT/GBDA ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ವಿರುದ್ಧ ಅಧಿಕಾರ ದುರುಪಯೋಗ ಮತ್ತು ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿದ್ದು, ಯೋಜನೆ ಸಂಬಂಧ ಆಂತರಿಕ ಮಾಹಿತಿಯನ್ನು ದುರುಪಯೋಗ ಮಾಡಿಕೊಂಡು ಅಕ್ರಮ ಲಾಭ ಗಳಿಸಿರುವ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಹಾಗೂ ಲಭ್ಯವಾಗಿರುವ ಪ್ರಾಥಮಿಕ ದಾಖಲೆಗಳು, ಸ್ಥಳೀಯ ಮಾಹಿತಿಗಳು, ಭೂ ನೋಂದಣಿ ವ್ಯವಹಾರಗಳು ಹಾಗೂ ಯೋಜನಾ ವ್ಯಾಪ್ತಿಯೊಳಗಿನ ಜಮೀನು ಖರೀದಿ ವಿವರಗಳ ಆಧಾರದ ಮೇಲೆ ಈ ದೂರನ್ನು ಸಲ್ಲಿಸಲಾಗಿದೆ.

ಈ ಪ್ರಕರಣದಲ್ಲಿ ಸಂಬಂಧಿತ ಜಮೀನುಗಳ ಮಾರಾಟ ಪತ್ರಗಳು, ನೋಂದಣಿ ದಾಖಲೆಗಳು, ಎನ್‌ಕಂಬರೆನ್ಸ್ ಸರ್ಟಿಫಿಕೆಟ್ (EC) ವಿವರಗಳು, ಭೂಸ್ವಾಧೀನ ಅಧಿಸೂಚನೆಗಳ ದಿನಾಂಕಗಳು ಹಾಗೂ ಜಮೀನು ಖರೀದಿಗಳ ನಡುವೆ ಇರುವ ಸಮಯ ಸಂಬಂಧವನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ. ಜೊತೆಗೆ, ಜಮೀನು ಖರೀದಿಗೆ ಬಳಸಲಾದ ಹಣದ ಮೂಲ, ಬ್ಯಾಂಕ್ ವ್ಯವಹಾರಗಳು, ಸಂಬಂಧಿತ ವ್ಯಕ್ತಿಗಳು, ಕುಟುಂಬ ಸದಸ್ಯರು, ಆತ್ಮೀಯರು, ಸಹಭಾಗಿಗಳು ಅಥವಾ ಕಂಪನಿಗಳ ನಡುವಿನ ಹಣಕಾಸು ಸಂಪರ್ಕಗಳನ್ನೂ ತನಿಖೆಗೆ ಒಳಪಡಿಸಬೇಕು.

ಜಿಲ್ಲಾಧಿಕಾರಿಗಳ ಆಸ್ತಿ ಘೋಷಣೆಗಳು, ಸೇವಾ ದಾಖಲೆಗಳು ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದಿರುವ ಆಸ್ತಿ ವ್ಯವಹಾರಗಳ ಸ್ವರೂಪವನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಇದಲ್ಲದೆ, ಯೋಜನೆಗೆ ಸಂಬಂಧಿಸಿದ ಗೋಪ್ಯ ಅಥವಾ ಅಂತರಿಕ ಮಾಹಿತಿಯು ಅನಧಿಕೃತವಾಗಿ ಸೋರಿಕೆಯಾಗಿ ನಿರ್ದಿಷ್ಟ ವ್ಯಕ್ತಿಗಳಿಗೆ ಲಾಭವಾಗಿರುವುದೇ, ಸರ್ಕಾರಿ ಪರಿಹಾರ ನಿಗದಿ ಪ್ರಕ್ರಿಯೆಯ ಮೇಲೆ ಯಾವುದೇ ಅನಧಿಕೃತ ಪ್ರಭಾವ ಬೀರಲಾಗಿದೆಯೇ ಹಾಗೂ ಸಂಬಂಧಿತ, ವ್ಯಕ್ತಿಗಳ ಅಥವಾ ಪರೋಕ್ಷ ಹೂಡಿಕೆದಾರರ ಪಾತ್ರವಿದೆಯೇ ಎಂಬ ಎಲ್ಲಾ ಅಂಶಗಳ ಕುರಿತು ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವುದು ಅತ್ಯಾವಶ್ಯಕವಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು, Prevention of Corruption Act, Benami Transactions Act, Prevention of Money Laundering Act ಸೇರಿದಂತೆ ಹಲವು ಕಾನೂನುಗಳ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿರುವ ದಿನೇಶ್ ಕಲ್ಲಹಳ್ಳಿ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೆಯೇ ಪ್ರಕರಣವನ್ನು CBI, ED, IT ಹಾಗೂ ಕರ್ನಾಟಕ ಲೋಕಾಯುಕ್ತ ಮೂಲಕ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : “ಮಾಧ್ಯಮಗಳ ಮುಂದಲ್ಲ, ತನಿಖಾ ಸಂಸ್ಥೆಗಳ ಎದುರು ಹೇಳಿಕೆ ನೀಡಿ” : ತ್ವಿಷಾ ಹೆತ್ತವರಿಗೆ ಸುಪ್ರೀಂ ಸೂಚನೆ!



















