ಬೆಂಗಳೂರು: ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಖ್ ಆಗಿರುವ ಎಚ್ ಡಿಎಫ್ ಸಿ ಈಗ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸಿದೆ. ಜುಲೈ 1ರಿಂದ ಹೊಸ ನಿಯಮಗಳು ಬದಲಾಗಿವೆ. ಎಚ್ ಡಿಎಫ್ ಸಿ ಬ್ಯಾಂಕ್ (HDFC Bank) ಕ್ರೆಡಿಟ್ ಕಾರ್ಡ್ ನಿಯಮಗಳ ಪರಿಷ್ಕರಣೆ ಮತ್ತು ವಿಮಾನ ನಿಲ್ದಾಣದ ಲಾಂಜ್ ಸೌಲಭ್ಯಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬರಲಿವೆ.
ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣಗಳ ಲಾಂಜ್ಗಳಲ್ಲಿ ಜನದಟ್ಟಣೆ ವಿಪರೀತ ಹೆಚ್ಚಾಗುತ್ತಿರುವುದರಿಂದ, ಬ್ಯಾಂಕುಗಳು ಉಚಿತ ಸೌಲಭ್ಯಗಳಿಗೆ ಬ್ರೇಕ್ ಹಾಕುತ್ತಿವೆ. ಎಚ್ ಡಿಎಫ್ ಸಿ ಬ್ಯಾಂಕ್ ಕೂಡ ತನ್ನ ಪ್ರಮುಖ ಪ್ರೀಮಿಯಂ ಕಾರ್ಡ್ಗಳ ಉಚಿತ ಲಾಂಜ್ ಪ್ರವೇಶಕ್ಕೆ ಖರ್ಚಿನ ಮಿತಿ ನಿಗದಿಪಡಿಸಿದೆ.
ಎಚ್ ಡಿಎಫ್ ಸಿ ರೆಗಾಲಿಯಾ ಗೋಲ್ಡ್ ಕಾರ್ಡ್ ಹೊಂದಿರುವವರು ಏರ್ ಪೋರ್ಟ್ ಉಚಿತ ಲಾಂಜ್ ಪ್ರವೇಶಕ್ಕೆ ಹಿಂದಿನ ತ್ರೈಮಾಸಿಕದಲ್ಲಿ ಕನಿಷ್ಠ 60 ಸಾವಿರ ರೂಪಾಯಿ ಖರ್ಚು ಮಾಡಿರಬೇಕು ಎಂಬುದು ಹೊಸ ನಿಯಮವಾಗಿದೆ. ಪ್ರತಿ ತ್ರೈಮಾಸಿಕಕ್ಕೆ 3 ಉಚಿತ ದೇಶೀಯ ಲಾಂಜ್ ಪ್ರವೇಶ ಸಿಗಲಿದೆ. ಉದಾಹರಣೆಗೆ, ನೀವು ಜುಲೈ – ಸೆಪ್ಟೆಂಬರ್ ಅವಧಿಯಲ್ಲಿ ಉಚಿತ ಲಾಂಜ್ ಸೌಲಭ್ಯ ಬಳಸಬೇಕೆಂದರೆ, ಅದಕ್ಕೂ ಹಿಂದಿನ ಅಂದರೆ ಏಪ್ರಿಲ್ – ಜೂನ್ ಅವಧಿಯಲ್ಲಿ ನಿಮ್ಮ ಕಾರ್ಡ್ ನಿಂದ ಕನಿಷ್ಠ 60 ಸಾವಿರ ರೂ. ಖರ್ಚು ಮಾಡಿರಬೇಕು. ಇಲ್ಲದಿದ್ದರೆ ಜುಲೈ ನಿಂದ ನಿಮಗೆ ಉಚಿತ ಪ್ರವೇಶ ಸಿಗುವುದಿಲ್ಲ.
ಲಾಂಜ್ ಸೌಲಭ್ಯದ ಜತೆಗೆ ಮೇ ತಿಂಗಳಿನಿಂದಲೇ ಅನ್ವಯವಾಗುವಂತೆ ರಿವಾರ್ಡ್ ಪಾಯಿಂಟ್ಗಳ ವ್ಯವಸ್ಥೆಯಲ್ಲೂ ಸಣ್ಣ ಬದಲಾವಣೆ ಮಾಡಲಾಗಿದೆ. ರೆಗಾಲಿಯಾ ಗೋಲ್ಡ್ ಕಾರ್ಡ್ ನಲ್ಲಿ ಮೊದಲು ಪ್ರತಿ 150 ರೂ. ಖರ್ಚು ಮಾಡಿದರೆ 4 ಬೇಸ್ ರಿವಾರ್ಡ್ ಪಾಯಿಂಟ್ ಗಳು ಸಿಗುತ್ತಿದ್ದವು, ಈಗ ಪ್ರತ 200 ರೂ. ಖರ್ಚಿಗೆ 5 ಬೇಸ್ ರಿವಾರ್ಡ್ ಪಾಯಿಂಟ್ ಗಳನ್ನು ನೀಡಲಾಗುತ್ತಿದೆ. ಇದರಿಂದ ರಿವಾರ್ಡ್ ಗಳಿಕೆಯ ಮೌಲ್ಯದಲ್ಲಿ ಸಣ್ಣ ಪ್ರಮಾಣದ ಇಳಿಕೆಯಾಗಿದೆ.



















