ಬಳ್ಳಾರಿ : ಜಿಲ್ಲೆಯ ಸಂಡೂರು-ಹೊಸಪೇಟೆ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ ಸಂಬಂಧ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ.
FASTag ವ್ಯವಸ್ಥೆ, ವಾಹನಗಳ ಲೆಕ್ಕಪತ್ರ ಹಾಗೂ ಟೋಲ್ ಹಣ ವಸೂಲಿ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳಿರುವ ಶಂಕೆ ವ್ಯಕ್ತಪಡಿಸಿರುವ ಅವರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (KRDCL) ವಿರುದ್ಧ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಸಲ್ಲಿಸಿರುವ ದೂರಿನಲ್ಲಿ, ಸಂಡೂರು-ಹೊಸಪೇಟೆ ಟೋಲ್ ಪ್ಲಾಜಾದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದರೂ, ಸಂಗ್ರಹವಾಗುತ್ತಿರುವ ಟೋಲ್ ಮೊತ್ತ ಹಾಗೂ ಸರ್ಕಾರಕ್ಕೆ ಸಲ್ಲಿಸಲಾಗುತ್ತಿರುವ ಲೆಕ್ಕಪತ್ರಗಳಲ್ಲಿ ಭಾರೀ ವ್ಯತ್ಯಾಸವಿದೆ ಎಂದು ಆರೋಪಿಸಲಾಗಿದೆ. ಟೋಲ್ ಪ್ಲಾಜಾದಲ್ಲಿ ವಾಹನಗಳ ನಿಖರ ಸಂಖ್ಯೆಯ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

FASTag ಮೂಲಕ ಸಂಗ್ರಹವಾಗುತ್ತಿರುವ ಹಣದ ವಿವರ, ವಾಹನಗಳ ಸಂಚಾರದ ಅಂಕಿಅಂಶ ಹಾಗೂ ಟೋಲ್ ವಸೂಲಿ ಪ್ರಕ್ರಿಯೆಯನ್ನು ಸ್ವತಂತ್ರ ಸಂಸ್ಥೆಯಿಂದ ಆಡಿಟ್ ಮಾಡಬೇಕು ಎಂದು ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ. ಜೊತೆಗೆ ಟೋಲ್ ಸಂಗ್ರಹದಲ್ಲಿ ತೊಡಗಿರುವ ಖಾಸಗಿ ಏಜೆನ್ಸಿಗಳು, ಟೆಂಡರ್ ಪ್ರಕ್ರಿಯೆ ಮತ್ತು ಹಣದ ಹಂಚಿಕೆ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇದೇ ವೇಳೆ, ಟೋಲ್ ಪ್ಲಾಜಾದಲ್ಲಿ ವಾಹನ ಸವಾರರಿಗೆ ಉಂಟಾಗುತ್ತಿರುವ ಸಮಸ್ಯೆಗಳು, ಸಂಚಾರ ದಟ್ಟಣೆ ಹಾಗೂ ಟೋಲ್ ನಿರ್ವಹಣೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಕೂಡ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ಈ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಸರ್ಕಾರಕ್ಕೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ. ಈ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರ ಈ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : CE ರಾಜೇಶ್ B.E ಪದವಿ ಪ್ರಮಾಣ ಪತ್ರ ಅಸಲಿಯೋ? ನಕಲಿಯೋ? – ತನಿಖೆಗೆ N.R ರಮೇಶ್ ಆಗ್ರಹ!


















