ಬೆಂಗಳೂರು : ನಗರದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಆಡಳಿತಾತ್ಮಕ ದ್ವೇಷ ರಾಜಕಾರಣ, ಆರ್ಥಿಕ ಭ್ರಷ್ಟಾಚಾರ ಹಾಗೂ ಮಹಿಳಾ ಸಿಬ್ಬಂದಿಗಳ ಮೇಲಿನ ಮಾನಸಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಕ್ಷೇಮಾಭಿವೃದ್ಧಿ ಒಕ್ಕೂಟ ಹಾಗೂ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಜಂಟಿಯಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಎಂ.ಎಸ್. ಚೇತನ್ ಕುಮಾರ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ವಿದ್ಯಾರ್ಥಿ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳು, ಅವರನ್ನು ತಕ್ಷಣವೇ ಅಮಾನತುಗೊಳಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿವೆ. ಇದೇ ವಿಚಾರವಾಗಿ ಮೇ 25ರಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿ ಮುಂಭಾಗ ಬೃಹತ್ ಧರಣಿ ನಡೆಸುವುದಾಗಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಪ್ರಕಟಣೆಯಲ್ಲಿ ಮಹಿಳಾ ಅತಿಥಿ ಉಪನ್ಯಾಸಕಿಯರಾದ ಅನುಷಾ ಹಾಗೂ ಪ್ರಿಯಾಂಕಾ ಅವರಿಗೆ ವಿತ್ತಾಧಿಕಾರಿಯಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕಳೆದ ಆರು ತಿಂಗಳಿನಿಂದ ಮಹಿಳಾ ಸಿಬ್ಬಂದಿಯನ್ನು ಚೇಂಬರ್‌ಗೆ ಒಂಟಿಯಾಗಿ ಕರೆಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಇತ್ತೀಚೆಗೆ ಉಪನ್ಯಾಸಕಿ ಅನುಷಾ ಕಚೇರಿಯಿಂದ ಹೊರ ಹೋಗಲು ಯತ್ನಿಸಿದಾಗ ದಾರಿ ತಡೆದು ದೌರ್ಜನ್ಯ ಎಸಗಲಾಗಿದೆ ಎನ್ನಲಾಗಿದ್ದು, ಅತಿಥಿ ಉಪನ್ಯಾಸಕರ ಸಂಬಳದ ಬಿಲ್ ಪಾಸ್ ಮಾಡಲು ಲಂಚದ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. “ಪ್ರಶ್ನಿಸಿದರೆ ನನ್ನ ಪ್ರಭಾವ ಬಳಸಿ ನಿಮ್ಮ ಜೀವನವೇ ನಾಶ ಮಾಡುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ” ಎಂದು ಸಂಘಟನೆಗಳು ಆರೋಪಿಸಿದ್ದು, ಈ ಕುರಿತು ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಲಾಗಿದೆ ಎಂದು ತಿಳಿಸಿವೆ.

ವಿದ್ಯಾರ್ಥಿನಿಯರ ಕ್ಷೇಮಾಭಿವೃದ್ಧಿ ಒಕ್ಕೂಟವೂ ವಿತ್ತಾಧಿಕಾರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ವಿಭಾಗದ ನಿರ್ದೇಶಕರ ಮೇಲಿನ ವೈಯಕ್ತಿಕ ದ್ವೇಷದಿಂದಾಗಿ ಕಳೆದ ಮೂರು ತಿಂಗಳಿನಿಂದ ಅತಿಥಿ ಉಪನ್ಯಾಸಕರು ಹಾಗೂ ವಿಷಯ ತಜ್ಞರಿಗೆ ನೀಡಬೇಕಾದ ಗೌರವಧನವನ್ನು ತಡೆಹಿಡಿಯಲಾಗಿದೆ. ಇದರಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.
ಪ್ಲೇಸ್‌ಮೆಂಟ್ ಟ್ರೇನಿಂಗ್ ಪ್ರೋಗ್ರಾಂಗೆ ಅಗತ್ಯ ಹಣ ಬಿಡುಗಡೆ ಮಾಡದೇ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಒಕ್ಕೂಟ ದೂರಿದೆ. ಇದೇ ವಿಚಾರವಾಗಿ ಇತ್ತೀಚೆಗೆ ಸುಮಾರು 650ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ವಿತ್ತಾಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದರೂ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ವಿಭಾಗದ ನಿರ್ದೇಶಕರು, “ನನ್ನ ವಿರುದ್ಧದ ಹಳೆಯ ಆರೋಪಗಳು ಸುಳ್ಳು ಎಂದು ತನಿಖೆಯಲ್ಲಿ ಸಾಬೀತಾಗಿದೆ. ನ್ಯಾಯಾಂಗವೂ ನನ್ನನ್ನು ನಿರಪರಾಧಿ ಎಂದು ಖುಲಾಸೆಗೊಳಿಸಿದೆ. ಆದರೂ ವಿತ್ತಾಧಿಕಾರಿ ವೈಯಕ್ತಿಕ ದ್ವೇಷದಿಂದ ತಾಂತ್ರಿಕ ಲೋಪಗಳನ್ನು ಮುಂದಿಟ್ಟುಕೊಂಡು ನನ್ನ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ವಿಭಾಗದಲ್ಲಿ ವಿದ್ಯಾರ್ಥಿಗಳೇ ಇಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಐಐಟಿ ಮದ್ರಾಸ್ ಮಾದರಿಯ ಡೇಟಾ ಸೈನ್ಸ್ ಮತ್ತು ಎಐ ಕೋರ್ಸ್‌ಗೆ ವಿದ್ಯಾರ್ಥಿನಿಯರ ದಾಖಲಾತಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಅಂಕಿಅಂಶಗಳೊಂದಿಗೆ ವಿವರಿಸಿದರು. 2021ರಲ್ಲಿ 67 ವಿದ್ಯಾರ್ಥಿಗಳಿದ್ದ ದಾಖಲಾತಿ ಇದೀಗ 650ಕ್ಕೆ ಏರಿಕೆಯಾಗಿದೆ. ಜೊತೆಗೆ ‘ಸ್ಮೈಲ್ ಫೌಂಡೇಶನ್’ ಮೂಲಕ 39 ಬಡ ವಿದ್ಯಾರ್ಥಿನಿಯರಿಗೆ ₹27 ಲಕ್ಷ ವಿದ್ಯಾರ್ಥಿವೇತನ ದೊರಕಿಸಲಾಗಿದೆ ಎಂದು ತಿಳಿಸಿದರು.
ಮೇ 25ರಂದು ಮಧ್ಯಾಹ್ನ 1:30ಕ್ಕೆ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿ ಮುಂಭಾಗ ವಿದ್ಯಾರ್ಥಿ ಸಂಘಟನೆಗಳು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಧರಣಿ ನಡೆಯಲಿದ್ದು, ಮಹಿಳಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರ ಹಿತ ರಕ್ಷಣೆಗಾಗಿ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ : ಸಂಡೂರು-ಹೊಸಪೇಟೆ ಟೋಲ್‌ನಲ್ಲಿ ಭಾರಿ ಅಕ್ರಮ? KRDCL ವಿರುದ್ಧ ತನಿಖೆಗೆ ದಿಶೇಶ್ ಕಲ್ಲಹಳ್ಳಿ ಆಗ್ರಹ


















