ಬೆಂಗಳೂರು : ಜಿಮ್ ವಾಟ್ಸಾಪ್ ಗ್ರೂಪ್‌ನಲ್ಲಿ ಆರಂಭವಾದ ಮಾತಿನ ಚಕಮಕಿ ಕೊನೆಗೆ ಯುವಕನ ಮೇಲೆ ಭೀಕರ ಹಲ್ಲೆಗೆ ತಿರುಗಿದ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅನ್ಶ್ ಠಾಕೂರ್ ಎಂಬ ಯುವಕನ ಮೇಲೆ ಮತಿನ್ ಮತ್ತು ಆತನ ಗ್ಯಾಂಗ್ ಮನ ಬಂದಂತೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಯುವಕನ ಮೇಲಿನ ಹಲ್ಲೆಯ ದೃಶ್ಯಗಳು ಸ್ಥಳೀಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ರಸ್ತುತ ಪದವಿ ಶಿಕ್ಷಣ ಪಡೆಯುತ್ತಾ ಪಾರ್ಟ್ ಟೈಂ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಅನ್ಶ್ ಠಾಕೂರ್ ಈ ಹಿಂದೆ ಇಲಿಯಾಜ್ ಎಂಬಾತನಿಂದ ಖಾಸಗಿ ಜಿಮ್‌ನಲ್ಲಿ ಟ್ರೈನಿಂಗ್ ಪಡೆದಿದ್ದನು. 2023ರಿಂದ ಸುಮಾರು ಎರಡು ವರ್ಷಗಳ ಕಾಲ ಇಲಿಯಾಜ್ ಬಳಿ ತರಬೇತಿ ಪಡೆದಿದ್ದ ಅನ್ಶ್, ಕಳೆದ ಆರು ತಿಂಗಳಿಂದ ಇಲಿಯಾಜ್ ಜೊತೆ ಸಂಪರ್ಕದಲ್ಲಿರಲಿಲ್ಲ ಎನ್ನಲಾಗಿದೆ. ಆದರೆ, ಮೇ 18ರ ರಾತ್ರಿ ಜಿಮ್‌ನ ವಾಟ್ಸಾಪ್ ಗ್ರೂಪ್‌ನಲ್ಲಿ ನಡೆದ ಕೆಲ ಮಾತುಕತೆಗಳ ವೇಳೆ ಬಾಡಿ ಬಿಲ್ಡಿಂಗ್ ವಿಚಾರವಾಗಿ ಇಲಿಯಾಜ್ ಮತ್ತು ಅನ್ಶ್ ನಡುವೆ ವಾಗ್ವಾದ ಶುರುವಾಗಿದ್ದು, ಇದೇ ಗಲಾಟೆ ನಂತರ ದೊಡ್ಡ ಮಟ್ಟಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ.
ಈ ಗಲಾಟೆಯ ಮಧ್ಯೆ ಮತ್ತೋರ್ವ ಟ್ರೈನೀ ಆಗಿದ್ದ ಮತಿನ್ ಎಂಬಾತ ಎಂಟ್ರಿ ಕೊಟ್ಟಿದ್ದಾನೆ ಎನ್ನಲಾಗಿದೆ. “ಟ್ರೈನರ್ ಬಗ್ಗೆ ಮಾತಾಡ್ತಿಯಾ” ಎಂದು ಅನ್ಶ್‌ಗೆ ಅವಾಜ್ ಹಾಕಿ ಬೆದರಿಕೆ ಹಾಕಿದ್ದ ಆರೋಪ ಕೇಳಿಬಂದಿದೆ. ಬಳಿಕ ಮೇ 19ರಂದು ಮಾತನಾಡಬೇಕಿದೆ ಎಂದು ಹೇಳಿ ಅನ್ಶ್ ಮನೆ ಬಳಿ ಮತಿನ್ ಹಾಗೂ ಆತನ ಗ್ಯಾಂಗ್ ಬಂದಿದ್ದರು. ಆರಂಭದಲ್ಲಿ ಮಾತುಕತೆ ನಡೆಸಿದಂತೆ ನಟಿಸಿದ ಆರೋಪಿಗಳು, ಏಕಾಏಕಿ ಅನ್ಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಾತನಾಡುತ್ತಿದ್ದ ವೇಳೆ ಮತಿನ್ ಎಂಬಾತ ಮೆಟಲ್ ನಕಲ್ಸ್ ಬಳಸಿ ಅನ್ಶ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗ್ಯಾಂಗ್ ಸೇರಿ ಯುವಕನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಹಲ್ಲೆಯಿಂದ ಗಾಯಗೊಂಡ ಅನ್ಶ್‌ಗೆ ಚಿಕಿತ್ಸೆ ನೀಡಲಾಗಿದ್ದು, ಘಟನೆ ಬಳಿಕ ಕುಟುಂಬಸ್ಥರು ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅನ್ಶ್ ಠಾಕೂರ್ ಕುಟುಂಬದ ದೂರಿನ ಮೇರೆಗೆ ಸಂಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಮತಿನ್, ಶೈಲೇೇಂದ್ರ, ಪವನ್, ಜಯಕಾಂತ್, ಶ್ರೇಯಸ್ ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದು, ಹಲ್ಲೆಗೆ ನಿಖರ ಕಾರಣ ಮತ್ತು ಗ್ಯಾಂಗ್‌ನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ : ಲಂಚ ಪಡೆಯುವಾಗಲೇ ‘ಲೋಕಾ’ ಬಲೆಗೆ ಬಿದ್ದ ಭ್ರಷ್ಟ ಕೇಸ್ ವರ್ಕರ್!



















